ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ನಿಯಮಗಳು, ೨೦೧೩

ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ, 2010

ಕರ್ನಾಟಕ ಸರ್ಕಾರ
ಕಸಂವಾಪ್ರ ೩೦ ರಾಪಸ ೨೦೧೧ ಕರ್ನಾಟಕ ಸರ್ಕಾರದ ಸಚಿವಾಲಯ.
ವಿಕಾಸಸೌಧ,
ಬೆಂಗಳೂರು ದಿನಾಂಕ: ೨೬-೦೬-೨೦೧೩

ಅಧಿಸೂಚನೆ

ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ನಿಯಮಗಳು ೨೦೧೨ ರ ಕರಡನ್ನು, ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ, ೨೦೧೦ ರ (೨೦೧೧ ರ ಕರ್ನಾಟಕ ಅಧಿನಿಯಮ ಸಂಖ್ಯೆ ೯) ೧೭ನೇ ಪ್ರಕರಣದ (೧) ನೇ ಉಪ- ಪ್ರಕರಣದ ಮೂಲಕ ಅಗತ್ಯಪಡಿಸಿದಂತೆ ಅಧಿಸೂಚನೆ ಸಂಖ್ಯೆ: ಕಸಂವಾಪ್ರ ೩೦ ರಾಪಸ ೨೦೧೧, ದಿನಾಂಕ: ೨೩-೦೬-೨೦೧೨ನ್ನು, ಕರ್ನಾಟಕ ರಾಜ್ಯ ಪತ್ರದ ವಿಶೇಷ
ಸಂಚಿಕೆಯ ಭಾಗ- ೪ಎ ದಿನಾಂಕ: ೨೩-೦೬-೨೦೧೨ ರಲ್ಲಿ ಪ್ರಕಟಿಸಿ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಈ ಕರಡು ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ೩೦ ದಿನಗಳ ಒಳಗಾಗಿ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿರುವುದರಿಂದ,

ಮತ್ತು ಸದರಿ ರಾಜ್ಯಪತ್ರವನ್ನು ದಿನಾಂಕ: ೧೯-೦೭-೨೦೧೨ ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ.

ಮತ್ತು ಸದರಿ ಕರಡು ಪತ್ರದ ಸಂಬಂಧದಲ್ಲಿ ಸ್ವೀಕರಿಸಲಾದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರವು ಪರಿಗಣಿಸಿರುವುದರಿಂದ.
ಈಗ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ, ೨೦೧೦ (೨೦೧೧ ರ ಕರ್ನಾಟಕ ಅಧಿನಿಯಮ ಸಂಖ್ಯೆ ೯) ರ ೧೭ ನೇ ಪ್ರಕರಣದ (೧) ನೇ ಉಪ- ಪ್ರಕರಣದ ಮೂಲಕ
ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮುಂದಿನ ನಿಯಮಗಳನ್ನು ರಚಿಸುತ್ತದೆ: ಎಂದರೆ:-
ನಿಯಮಗಳು
 

೧. ಶೀರ್ಷಿಕೆ ಮತ್ತು ಪ್ರಾರಂಭ-

(೧) ಈ ನಿಯಮಗಳನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ನಿಯಮಗಳು, ೨೦೧೩ ಎಂದು ಕರೆಯತಕ್ಕದ್ದು.
(೨) ಇವು ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

 

 

೨. ಪರಿಭಾಷೆಗಳು-

ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು-
(ಎ) “ಅಧಿನಿಯಮ ಎಂದರೆ, ಸಾರ್ವಜನಿಕ ದಾಖಲೆಗಳ ಅಧಿನಿಯಮ, ೨೦೧೦ (೨೦೧೧ ರ ಕರ್ನಾಟಕ ಅಧಿನಿಯಮ ಸಂಖ್ಯೆ ೪);
(ಬಿ) “ಮೌಲ್ಯ ನಿರ್ಣಯ” ಎಂದರೆ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಅಥವಾ ಕಚೇರಿ ಮುಖ್ಯಸ್ಥರೊಂದಿಗೆ ಸಂದರ್ಭಾನುಸಾರವಾಗಿ ಸಾರ್ವಜನಿಕ ದಾಖಲೆಗಳು.
(ಸಿ) “ವರ್ಗೀಕೃತ ದಾಖಲೆಗಳು” ಎಂದರೆ, ಸಚಿವಾಲಯ ಕೈಪಿಡಿ ಅಥವಾ ಕಛೇರಿ ಕೈಪಿಡಿಯ ಕಾರ್ಯವಿಧಾನ ಅಥವಾ ಕರ್ನಾಟಕ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಯಾವುದೇ ಇತರ ಸೂಚನೆಗಳಲ್ಲಿ ಹೇಳಲಾದ ಕಾರ್ಯವಿಧಾನಗಳ ಅನುಸಾರವಾಗಿ ಅತ್ಯಂತ ರಹಸ್ಯ, ಗೋಪ್ಯ ಮತ್ತು ನಿರ್ಬಂಧಿತ ಎಂದು ವರ್ಗೀಕರಿಸಲಾದ ಸಾರ್ವಜನಿಕ ದಾಖಲೆಗಳು,
(ಡಿ) “ಅಭಿರಕ್ಷೆ” ಎಂದರೆ ಸಾರ್ವಜನಿಕ ದಾಖಲೆಗಳ ಸ್ವಾಧೀನತೆ;
(ಇ) “ನಿಷ್ಕ್ರಿಯ ಮಂಡಳಿ” ಎಂದರೆ ನಿಗಮಿತ ಅಥವಾ ನಿಗಮಿತ ಅಲ್ಲದ ಮಂಡಳಿಯಾಗಿದ್ದು, ಇದನ್ನು ತಮ್ಮ ಪ್ರಕಾರ್ಯಗಳನ್ನು ನಿರ್ವಹಿಸಲು ಯಾರೇ ಉತ್ತರಾಧಿಕಾರಿ ಇಲ್ಲದ ಕಾರಣ ಸಮಾಪನಗೊಳಿಸಲಾದುದು.
(ಎಫ್) “ವರ್ಗೀಕರಣ ಪಟ್ಟಿಯಿಂದ ಬಿಡುವುದು” ಎಂದರೆ ಇವುಗಳ ಮೌಲ್ಯ ನಿರ್ಧಾರಕೆಯ ತರುವಾಯ ಖಾತರಿ ವರ್ಗೀಕರಣಗಳನ್ನು ಕೆಳಗಿಳಿಸುವುದು;
(ಜಿ) “ಕಡತ” ಎಂದರೆ ನಿರ್ದಿಷ್ಟ ವಸ್ತು ವಿಷಯದ ಮೇಲೆ ಸಾರ್ವಜನಿಕ ದಾಖಲೆಗಳಿಗೆ ಸಂಬಂಧಿಸಿದ ಪತ್ರ ವ್ಯವಹಾರ, ಟಿಪ್ಪಣಿಗಳು ಮತ್ತು ಅದರ ಅನುಬಂಧಗಳು ಮತ್ತು ಕಡತದ ಸಂಖ್ಯೆ ಇರುವ ಪತ್ರಗಳ ಟಿಪ್ಪಣಿ;
(ಹೆಚ್) “ನಮೂನೆ” ಎಂದರೆ ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆ
(ಐ) “ಸಾಮಾನ್ಯ ದಾಖಲೆ ವಿಭಾಗ“ ಎಂದರೆ ಸರ್ಕಾರದ “ಡಿ” ವರ್ಗದ ದಾಖಲೆಗಳನ್ನು ಹೊರತುಪಡಿಸಿ ಚಾಲ್ತಿ/ಅರೆ ಚಾಲ್ತಿ ದಾಖಲೆಗಳನ್ನು ಸಂರಕ್ಷಿಸಲಾಗಿರುವ ವಿಭಾಗ;
(ಜೆ) “ಸದಸ್ಯ” ಎಂದರೆ ಮಂಡಳಿಯ ಸದಸ್ಯ
(ಕೆ) ಖಾಸಗಿ ದಾಖಲೆಗಳು ಎಂದರೆ ಒಬ್ಬ ಖಾಸಗಿ ವ್ಯಕ್ತಿ ಅಥವಾ ಯಾವುದೇ ಸರ್ಕಾರೇತರ ಸಂಸ್ಥೆಯ ಸ್ವಾಧೀನದಲ್ಲಿ ಇಟ್ಟಿರುವ ದಾಖಲೆಗಳು;
(ಎಲ್) “ದಾಖಲು ಮಾಡುವುದು” ಎಂದರೆ ಕಡತದವೊಂದನ್ನು ಈ ಬಗ್ಗೆ ಪರಿಗಣಿಸಲಾದ ಎಲ್ಲ ವಿಷಯಗಳ ಮೇಲೆ ಕ್ರಮವನ್ನು ಪೂರ್ಣಗೊಳಿಸಿದ ನಂತರ ಕಡತವನ್ನು ಮುಕ್ತಾಯಗೊಳಿಸಿದ ಪ್ರಕ್ರಿಯೆ;
(ಎಂ) “ಖಾಯಂ ಸ್ವರೂಪದ ದಾಖಲೆಗಳು” ಎಂದರೆ ಇವುಗಳು ಸಾರ್ವಜನಿಕ ದಾಖಲೆಗಳಾಗಿದ್ದು, ಅವುಗಳನ್ನು ಕೈಪಿಡಿ ಅಥವಾ ಕಛೇರಿ ವಿಧಾನ ಅಥವಾ ವಿಷಯದ ಮೇಲಿನ ಸೂಚನೆಗಳಲ್ಲಿ ಹೇಳಲಾದ ವಿಧಾನಗಳ ಅನುಸಾರವಾಗಿ ದಾಖಲೆಗಳ ಸೃಜನಾ ಏಜೆನ್ಸಿ ಮಾತ್ರ ೫ನೇ ನಿಯಮ (೧) ನೇ ಉಪನಿಯಮದ ಮೇರೆಗೆ ಗೊತ್ತುಪಡಿಸಲಾದ ಅವಧಿಗಾಗಿ ದಾಖಲು ಮಾಡಿದ ಮೇಲೆ ಸಂರಕ್ಷಿಸುವುದು ಮತ್ತು ಕೊನೆತನಕ ನಿರ್ವಹಿಸುವುದು.
(ಎನ್) “ದಾಖಲೆಗಳನ್ನು ಉಳಿಸಿಕೊಳ್ಳುವ ಅನುಸೂಚಿ” ಎಂದರೆ ಇಟ್ಟುಕೊಂಡ ಅವಧಿಯನ್ನು ಉಪಬಂಧಿಸಲಾದ ಅನುಸೂಚಿ.
(ಒ) “ಪುನರವಲೋಕನ” ಎಂದರೆ ಸಂದರ್ಭಾನುಸಾರ ಅವುಗಳನ್ನು ಮುಂದಿನ ನಿರ್ಧರಣೆ ಉಳಿಸಿಕೊಳ್ಳುವಿಕೆ ಅಥವಾ ನಾಶಪಡಿಸಲು ಉಳಿಸಿಕೊಳ್ಳುವ ಅವಧಿಯು ಮುಕ್ತಾಯವಾದ ಮೇಲೆ ದಾಖಲು ಮಾಡಿದ ಕಡತಗಳ ನಿಯತವಾದ ಮೌಲ್ಯ ನಿರ್ಧಾರಣೆ;
(ಪಿ) “ಪ್ರಕರಣ’ ಎಂದರೆ ಈ ಅಧಿನಿಯಮದ ಪ್ರಕರಣ;
(ಕ್ಯೂ) “ಸ್ಥಾಯಿ ರಕ್ಷಾ ಕಡತ” ಎಂದರೆ ಅಕಾರದಿ ಕ್ರಮದಲ್ಲಿ ಜೋಡಿಸಿದ ಕಾರ್ಯನೀತಿ, ಆದೇಶಗಳು, ಸೂಚನೆಗಳು, ಅಥವಾ ಇದಕ್ಕೆ ಸಂಬಂಧಿಸಿದ ಯಾವುದೇ ಇತರ ಪ್ರಾಸಂಗಿಕ ವಿಷಯದ ಪ್ರತಿಗಳನ್ನು ಒಳಗೊಂಡಿರುವ ನಿರ್ದಿಷ್ಟ ವಸ್ತು ವಿಷಯದ ಮೇಲಿನ ಕಾಗದ ಪತ್ರಗಳ ಸಂಕಲನ;
(ಆರ್) ಇಲ್ಲಿ ಬಳಸಲಾದ ಮತ್ತು ಪರಿಭಾಷಿಸಿಲ್ಲದ, ಆದರೆ ಅಧಿನಿಯಮದಲ್ಲಿ ಪರಿಭಾಷಿಸಲಾದ ಪದಗಳೂ ಮತ್ತು ಪದಾವಳಿಗಳಿಗೆ ಅಧಿನಿಯಮದಲ್ಲಿ ಇವುಗಳಿಗೆ ಕ್ರಮವಾಗಿ ನೀಡಲಾದ ಅರ್ಥಗಳನ್ನೇ ಹೊಂದಿರತಕ್ಕದ್ದು.

 

೩. ದಾಖಲೆಗಳ ಅಧಿಕಾರಿಗೆ ಸಂಬಂಧಿಸಿದ ಮಾಹಿತಿ:-

ಪ್ರತಿಯೊಂದು ದಾಖಲೆಗಳನ್ನು ಸೃಜಿಸುವ ಏಜೆನ್ಸಿಯು ೫ ನೇ ಪ್ರಕರಣದ (೧)ನೇ ಉಪ ಪ್ರಕರಣದ ಮೇರೆಗೆ ಒಬ್ಬ ದಾಖಲೆಗಳ ಅಧಿಕಾರಿಯನ್ನು
ನಾಮನಿರ್ದೇಶನ ಮಾಡಿದ ತರುವಾಯ ಆ ಬಗ್ಗೆ ಪತ್ರಾಗಾರ ಇಲಾಖೆಯ ನಿರ್ದೇಶಕರಿಗೆ ತಿಳಿಸತಕ್ಕದ್ದು.

 

೪. ಸ್ಥಾಯಿ ರಕ್ಷಾ ಕಡತದ ನಿರ್ವಹಣೆ:-

ದಾಖಲೆಗಳ ಅಧಿಕಾರಿಯು ಸ್ಥಾಯಿ ರಕ್ಷಾ ಕಡತ ಮತ್ತು ೬ ನೇ ಪ್ರಕರಣದ (೨)ನೇ ಉಪ ಪ್ರಕರಣದ ಉಪಬಂಧಗಳ ಅನುಸಾರವಾಗಿ ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿಯ ಮುಖ್ಯಸ್ಥರು ನೀಡಿದ ನಿರ್ದೇಶನಗಳ ಸೂಕ್ತ ದಾಖಲೆಯನ್ನು ನಿರ್ವಹಿಸಲು ಮತ್ತು ಇಟ್ಟುಕೊಂಡು ಬರಲು ಜವಾಬ್ದಾರನಾಗಿರತಕ್ಕದ್ದು ಮತ್ತು ಪತ್ರಾಗಾರ ಇಲಾಖಾ ನಿರ್ದೇಶಕರು ಅಥವಾ ಸಂದರ್ಭಾನುಸಾರ ಪತ್ರಾಗಾರ ಇಲಾಖಾ ಮುಖ್ಯಸ್ಥರು ಅಗತ್ಯಪಡಿಸಿದಾಗಲೆಲ್ಲಾ ಅದನ್ನು ತಪಾಸಣೆಗೆ ಒದಗಿಸತಕ್ಕದ್ದು.

 

೫. ಖಾಯಂ ಸ್ವರೂಪದ ಸಾರ್ವಜನಿಕ ದಾಖಲೆಗಳ ಅಂಗೀಕಾರ:-

 

(೧) ದಾಖಲೆಗಳ ಸೃಜಿಸುವ ಏಜೆನ್ಸಿಯು ದಾಖಲು ಮಾಡಿದ ತರುವಾಯ ಅದನ್ನು ತನ್ನ ದಾಖಲೆಗಳ ಕೊಠಡಿಯಲ್ಲಿ ಇಪ್ಪತ್ತೈದು ವರ್ಷಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಗಾಗಿ ಇಟ್ಟುಕೊಳ್ಳಲು ಪತ್ರಾಗಾರ ಇಲಾಖೆಯ ನಿರ್ದೇಶಕರು ಖಾಯಂ ಸ್ವರೂಪದ ಸಾರ್ವಜನಿಕ ದಾಖಲೆಗಳ ಭದ್ರತೆ ಮತ್ತು ರಕ್ಷಣೆಗಾಗಿ ಅಂಗೀಕರಿಸುವುದು.
(೨) ದಾಖಲೆಗಳ ಅಧಿಕಾರಿಯು ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರಿಗೆ ಪ್ರತಿ ವರ್ಷದ ೩೧ ನೇ ಜನವರಿಗೆ ಮೊದಲು ನಮೂನೆ ೧ ರಲ್ಲಿ ಆ ವರ್ಷದ ಮೌಲ್ಯ ನಿರ್ಣಯಕ್ಕಾಗಿ ಬಾಕಿ ಇರುವಂತಹ ಖಾಯಂ ಸ್ವರೂಪದ ಎಲ್ಲಾ ಸಾರ್ವಜನಿಕ ದಾಖಲೆಗಳ ವಿವರಗಳು ನೀಡತಕ್ಕದ್ದು.
(೩) (೨) ನೇ ಉಪ್ನಿಯಮದ ಮೇರೆಗೆ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೀರಿ ಮುಖ್ಯಸ್ಥರು ತನ್ನ ಅಧಿಕಾರಿಗಳ ಮೂಲಕ ಸಾರ್ವಜನಿಕ ದಾಖಲೆಗಳ ಮೌಲ್ಯ ನಿರ್ಣಯವನ್ನು ನಡೆಸಲು ದಾಖಲೆಗಳ ಅಧಿಕಾರಿಗೆ ನೆರವು ನೀಡತಕ್ಕದ್ದು. ಮೌಲ್ಯ ನಿರ್ಣಯದ ಕಾರ್ಯವು ಮುಕ್ತಾಯಗೊಂಡ ಮೇಲೆ ದಾಖಲೆಗಳ ಅಧಿಕಾರಿಯು ನಮೂನೆ- ೨ ರಲ್ಲಿ ಎಲ್ಲ ಸಾರ್ವಜನಿಕ ದಾಖಲೆಗಳ ವರ್ಗಾವಣೆಯ ಒಂದು ಪಟ್ಟಿಯಮ್ನ ದ್ವಿಪತ್ರಿಯಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ಎಲ್ಲಾ ಸಾರ್ವಜನಿಕ ದಾಖಲೆಗಳನ್ನು ಪತ್ತಾಗಾರ ಇಲಾಖೆಯ ನಿರ್ದೇಶಕರ ಅಥವಾ ಸಂದರ್ಭಾನುಸಾರ ಕಚೇರಿಯ ಮುಖ್ಯಸ್ಥರಲ್ಲಿ ಸಂರಕ್ಷತೆಗಾಗಿ ಇಡತಕ್ಕದ್ದು, ಇವರು ಆ ಸಂಬಂಧದಲ್ಲಿ ತನಗೆ ಮನವರಿಕೆಯಾದರೆ ಸಾರ್ವಜನಿಕ ದಾಖಲೆಗಳನ್ನು ಸ್ವೀಕರಿಸಿದ್ದಕ್ಕಾಗಿ ವರ್ಗಾವಣೆ ಪಟ್ಟಿಯ ಒಂದು ಪ್ರತಿಯನ್ನು ದಾಖಲೆಗಳ ಅಧಿಕಾರಿಗೆ ಹಿಂತಿರುಗಿಸತಕ್ಕದ್ದು.
(೪) ದಾಖಲೆಗಳ ಅಧಿಕಾರಿಯು ಮೌಲ್ಯ ನಿರ್ಣಯದ ತರುವಾಯ, ಇಪ್ಪತ್ತೈದು ವರ್ಷಗಳ ಅವಧಿಗೂ ಮೀರಿದ ಯಾವುದೇ ದಾಖಲೆ ಅಥವಾ ಕಡತವನ್ನು ಉಳಿಸಿಕೊಳ್ಳುವುದು ಅವಶ್ಯವೆಂದು ಭಾವಿಸಿದರೆ, ಅದನ್ನು ಹಾಗೇ ಮಾಡುವ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ ಪತ್ರಾಗಾರ ಇಲಾಖಾ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರಿಗೆ ತಿಳಿಸಬಹುದು.

 

೬. ಸಾರ್ವಜನಿಕ ದಾಖಲೆಗಳನ್ನು ಹಿಂತೆಗೆದುಕೊಳ್ಳುವುದು-

(೧) ಪತ್ರಾಗಾರ ಇಲಾಖಾ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರ ಬಳಿ ಇಡಲಾದ ಮತ್ತು ನಿರ್ವಹಿಸಲಾದ ಸಾರ್ವಜನಿಕ ದಾಖಲೆಗಳು ಯಾವುದೇ ಅಧಿಕೃತ ಉದ್ದೇಶಕ್ಕಾಗಿ ದಾಖಲೆಗಳನ್ನು ಸೃಜಿಸಿದ ಏಜೆನ್ಸಿಗೆ ಬೇಕಿದ್ದರೆ ಆಗ, ದಾಖಲೆಗಳ ಅಧಿಕಾರಿಯು ಪತ್ರಾಗಾರದ ನಿರ್ದೇಶಕರಿಗೆ ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರಿಗೆ ನಮೂನೆ- ೩ ರಲ್ಲಿ ಯುಕ್ತವಾದ ಸಹಿ ಮಾಡಿದ ಮೊಹರು ಇರುವ ಕೋರಿಕೆ ಪತ್ರವನ್ನು ಕಳುಹಿಸತಕ್ಕದ್ದು.
(೨) (೧)ನೇ ಉಪ ನಿಯಮದ ಮೇರೆಗೆ ಕೋರಲಾದ ಸಾರ್ವಜನಿಕ ದಾಖಲೆಗಳನ್ನು ಆ ಉದ್ದೇಶ ಈಡೇರಿದ ಕೂಡಲೇ ಹಿಂತಿರುಗಿಸಬಹುದು. ಆದರೆ ದಾಖಲೆಗಳ ಅಧಿಕಾರಿ ಅಥವಾ ದಾಖಲೆಗಳನ್ನು ಸೃಜಿಸುವ ಏಜೆನ್ಸಿಯು ಅವುಗಳನ್ನು ಆರು ತಿಂಗಳ ಅವಧಿಗೂ ಮೀರಿ ಹೆಚ್ಚು ಕಾಲ ಇಟ್ಟುಕೊಳ್ಳತಕ್ಕದ್ದಲ್ಲ.

 

೭. ದಾಖಲೆಗಳ ವರ್ಗೀಕರಣಕ್ಕಾಗಿ ಸಾಮಾನ್ಯ ತತ್ವಗಳು:-

(೧) ಎಲ್ಲಾ ದಾಖಲು ಮಾಡಲಾದ ಕಡತಗಳನ್ನು ಪ್ರಾಮುಖ್ಯತೆ ಮತ್ತು ಆಡಳಿತಾತ್ಮಕ ಅಗತ್ಯಗಳಿಗೆ ಸಂಬಂಧಿಸಿದಂತೆ ಪರಾಮರ್ಶನ
ಮಾಡುವುದಕ್ಕಾಗಿ ಅವು ಯಾವ ಅವಧಿಯವರೆಗೆ ಅಗತ್ಯವಾಗುವ ಸಂಭವವಿದೆಯೋ ಆ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಸಂರಕ್ಷಿಸುವ ಉದ್ದೇಶಕ್ಕಾಗಿ ಆ ಎಲ್ಲ ಕಡತಗಳನ್ನು ವರ್ಗೀಕರಣ ಮಾಡತಕ್ಕದ್ದು. ಅಗತ್ಯವಾಗಬಹುದಾದಂಧ ಪ್ರತಿಯೊಂದು ಕಡತವನ್ನು ಸಂರಕ್ಷಿಸಿಡತಕ್ಕದ್ದು ಮತ್ತು ಸ್ಥಳವನ್ನು ಉಳಿಸಲು ಮತ್ತು ಹುಡುಕುವ ಕಾರ್ಯವನ್ನು ಸರಳಗೊಳಿಸುವ ಸಲುವಾಗಿ ಅನಗತ್ಯವಾದ ಪ್ರತಿಯೊಂದು ಕಡತವನ್ನು ನಾಶಪಡಿಸತಕ್ಕದ್ದು. ಒಂದು ಕಡತವನ್ನು ಅಲ್ಪಾವಧಿ ಅಥವಾ ಧಿರ್ಘಾವಧಿಗೆ ಸಂರಕ್ಷಿಸಲು ಉತ್ತಮ ಆಡಳಿತಾತ್ಮಕ ಅಗತ್ಯತೆಯು ಇರುವಾಗ ಇದನ್ನು ದೀರ್ಘಕಾಲ ಸಂರಕ್ಷಿಸುವುದು ಭಿನ್ನವಾದ ಕ್ರಮವಾಗಿರುತ್ತದೆ. ಸಂರಕ್ಷಣೆಯ ಕನಿಷ್ಠ ಅವಧಿಯು ಕಡತದಲ್ಲಿ ಹೊರಡಿಸಲಾದ ಆದೇಶಗಳ ಯಾವುದೇ ಪುನರವಲೋಕನ ಅಥವಾ ಮರು ಪರಿಶೀಲನೆಗಾಗಿ ಒದಗಿಸಲು ಅನುಕೂಲನಾಗಿರುವುದು ಅಷ್ಟೆ ಅಗತ್ಯವಾಗಿರುತ್ತದೆ.
(೨) ಮುಖ್ಯವಾದ ಕಡತಗಳು ಅಥವಾ ಭವಿಷ್ಯದಲ್ಲಿ ಮುಖ್ಯವಾಗಬಹುದಾದಂತ ಕಡತಗಳು ಅವು ಇತಿಹಾಸದ ಯಾವುದೇ ಅಂಶದ ಮೇಲೆ ಎಂದರೆ ರಾಜಕೀಯ, ಸೇನೆ, ಸಾಮಾಜಿಕ, ಆರ್ಥಿಕ, ಇತ್ಯಾದಿ ಅಂಶಗಳ ಮೇಲೆ ಪರೋಕ್ಷವಾಗಿ ಮಾಹಿತಿಯ ಮೂಲವಾಗಿರುವ ಅಥವಾ ಜೀವನ ಚರಿತ್ರೆಯ ಅಥವಾ ಪ್ರಾಚೀನ ವಸ್ತು ಶೋಧನೆಯ ಹಿನ್ನಲೆ ಹೊಂದಿರುವ ಅಥವಾ ಹಾಗೆ ಮುಂದೆ
ರುಜುವಾತಾಗಬಹುದಾದಂಥ ಕಡತಗಳನ್ನು ನಾಶಪಡಿಸದಂತೆ ಎಚ್ಚರಿಕೆ ವಹಿಸತಕ್ಕದ್ದು.
(೩) ದಾಖಲೆಗಳನ್ನು ಎ, ಬಿ, ಸಿ, ಡಿ ಎಂದು ವರ್ಗೀಕರಿಸತಕ್ಕದ್ದು. ಇವುಗಳ ಲಕ್ಷಣಗಳನ್ನು ಈ ಮುಂದೆ ವಿವರಿಸಲಾಗಿದೆ. ಅಂಥ ವರ್ಗೀಕರಣಗಳನ್ನು ಅನುಮೋದಿಸಲು ಸಕ್ಷಮ ಅಧಿಕಾರಿಯನ್ನು ಸಹ ಅದರಲ್ಲಿ ಸೂಚಿಸಲಾಗಿದೆ:-
(i) “ಎ” ವರ್ಗ- ಅನಿರ್ದಿಷ್ಟಕಾಲದವರೆಗೆ ಸಂರಕ್ಷಿಸಬೇಕಾಗುತ್ತದೆ. ಈ ವರ್ಗದಲ್ಲಿ ಪ್ರಮುಖ ಪ್ರಶ್ನೆಗಳನ್ನು ಚರ್ಚೆ ಮಾಡಲಾದ ಅಥವಾ ಪ್ರಮುಖ ಪೂರ್ವನಿದರ್ಶನಗಳನ್ನು ಸ್ಥಾಪಿಸುವ ಆದೇಶಗಳನ್ನೊಳಗೊಂಡಿರುವುದು ಅಥವಾ ಖಾಯಂ/ ಪ್ರಧಾನ ಸ್ವರೂಪದ ಸಾಮಾನ್ಯ ಸೂಚನೆಗಳು ಅಥವಾ ನಿರ್ಣಯಗಳನ್ನು ಒಳಗೊಂಡಿರುವಂಥ ಕಡತಗಳನ್ನು ಸೇರಿಸಲಾಗಿದೆ. ಈ ಕಡತಗಳನ್ನು
ಅಗತ್ಯವಿದ್ದಾಗಲೆಲ್ಲಾ ಮುದ್ರಿಸತಕ್ಕದ್ದು ಸರ್ಕಾರದ ಉಪ ಕಾರ್ಯದರ್ಶಿ ಅಥವಾ ಇಲಾಖೆಯ ಮುಖ್ಯಸ್ಥರ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯು ಈ ವರ್ಗೀಕರಣವನ್ನು ಅನುಮೋದಿಸತಕ್ಕದ್ದು.
(ii) “ಬಿ” ವರ್ಗ- ೩೦ ವರ್ಷಗಳವರೆಗೆ ಸಂರಕ್ಷಿಸಬೇಕಾಗುತ್ತದೆ. ಈ ವರ್ಗದಲ್ಲಿ ಮೇಲೆ ಹೇಳಲಾದಂಥ ವರ್ಗದ ಕಡತಗಳಿಗೆ ಹಂಚಿಕೆ ಮಾಡಲಾಗಿದೆ ಆದರೆ ಅವು ಕೆಲವು ದಶಕಗಳ ನಂತರ ಪರಾಮರ್ಶನಕ್ಕಾಗಿ ಬೇಕಾಗುವ ಸಂಭವವಿರುವುದಿಲ್ಲ. ಸರ್ಕಾರದ ಆಧೀನ ಕಾರ್ಯದರ್ಶಿಯ ಅಥವಾ ಸಮೂಹ ’ಎ’ ಅಧಿಕಾರಿಯ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಅಧಿಕಾರಿಯು ಈ ವರ್ಗೀಕರಣವನ್ನು
ಅನುಮೋದಿಸತಕ್ಕದ್ದು.
(iii) ”ಸಿ” ವರ್ಗ- ೧೦ ವರ್ಷಗಳವರೆಗೆ ಸಂರಕ್ಷಿಸಬೇಕಾಗುತ್ತದೆ. ಈ ವರ್ಗದಲ್ಲಿ ಅತಿ ಸೀಮಿತ ವರ್ಷಗಳ ಅವಧಿಯವರೆಗೆ ಸಂರಕ್ಷಿಸಬೇಕಾದ ಎರಡನೇ ಪ್ರಾಮುಖ್ಯತೆಯ ಕಡತಗಳಿಗೆ ಹಂಚಿಕೆ ಮಾಡಲಾಗಿದೆ ಶಾಖಾಧಿಕಾರಿಯು ಅಥವಾ ಸಮೂಹ ಬಿ ಅಧಿಕಾರಿಯ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಅಧಿಕಾರಿಯು ಈ ವರ್ಗೀಕರಣವನ್ನು ಅನುಮೋದಿಸತಕ್ಕದ್ದು.
(iv) “ಡಿ” ವರ್ಗ- ಕಡತವು ಮುಕ್ತಾಯವಾದಂತ ವರ್ಷದ ಕೊನೆಯಲ್ಲಿ ಒಂದು ವರ್ಷದ ತರುವಾಯ ನಾಶಪಡಿಸಬೇಕಾದುದು. ಈ ವರ್ಗದ ಕಡತಗಳಲ್ಲಿ, ಕೇವಲ ತಾತ್ಕಾಲಿಕ ಸ್ವರೂಪದ ಮತ್ತು ಸಂರಕ್ಷಿಸಿಡುವುದು ಅಗತ್ಯವಿಲ್ಲದಂಥ ಒಳಾಂಶಗಳನ್ನೊಳಗೊಂಡಿರತಕ್ಕದ್ದು. ಶಾಖಾಧಿಕಾರಿ ದರ್ಜೆಗಿಂತ ಕಡಿಮೆಯಲ್ಲದ ಅಧಿಕಾರಿಯು ಈ ವರ್ಗೀಕರಣವನ್ನು ಅನುಮೋದಿಸತಕ್ಕದ್ದು.
(೪) ಮೇಲಿನ ಪ್ರವರ್ಗಗಳ ದಾಖಲೆಗಳ ವರ್ಗೀಕರಣವು ಒಂದು ಇಲಾಖೆಯಲ್ಲಿ ವ್ಯವಹರಿಸುವ ವಿಷಯಗಳನ್ನು ಅಧಿಕೃತವಾದ (ಎಬಿಸಿಡಿ) ವರ್ಗೀಕರಣದ ಮೂಲಕ ಸರಳಗೊಳಿಸತಕ್ಕದ್ದು. ವಿಧಾನದ ಮೂಲಕ ಮುಂದುವರೆಸತಕ್ಕದ್ದು. ಇಲಾಖೆಯಲ್ಲಿ ವ್ಯವಹರಿಸುವ ವಿವಿಧ ವಿಷಯಗಳನ್ನು ಆಡಳಿತಾತ್ಮಕ ಮತ್ತು ಐತಿಹಾಸಿಕ ಅಂಶದ ದೃಷ್ಟಿಯಿಂದ ಪ್ರತಿಯೊಂದು ವಿಷಯದ ಸ್ವರೂಪ ಮತ್ತು ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಬಿಸಿಡಿ ಪ್ರವರ್ಗಗಳನ್ನಾಗಿ ಗುಂಪಾಗಿಸತಕ್ಕದ್ದು.
(೫) ವರ್ಗೀಕರಣ ಮಾಡುವ ವಿಧಾನವು ವ್ಯವಹರಿಸುವುದನ್ನು ಆಧರಿಸಿ ಅಧಿಕೃತ ಎಬಿಸಿಡಿ ವರ್ಗೀಕರಣದ ಅನುಸಾರವಾಗಿ ಯಾವುದೇ ಕಡತದ ಮೇಲೆ ಕೈಗೊಳ್ಳಬೇಕಾದ ಅಗತ್ಯ ಕ್ರಮ ಇಲ್ಲದಿರುವಾಗ ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ಇಡಲು ಸಲಹೆ ಮಾಡತಕ್ಕದ್ದು. ದಾಖಲು ಮಾಡುವುದಕ್ಕಾಗಿ ಮತ್ತು ಎಬಿಸಿಡಿ ಪಟ್ಟಿಯ ಅಡಿಯಲ್ಲಿ ವರ್ಗೀಕರಿಸುವುದಕ್ಕಾಗಿ ಸಮುಚಿತ ಅಧಿಕಾರಿಯ ಅನುಮೋದನೆಗೆ ಕಡತವನ್ನು ಸಲ್ಲಿಸತಕ್ಕದ್ದು.

 

೮. ವರ್ಗೀಕರಿಸಲಾದ ದಾಖಲೆಗಳನ್ನು ಕೆಳದರ್ಜೆಗಿಳಿಸುವುದು:

(೧) ದಾಖಲೆಗಳನ್ನು ಸೃಜಿಸುವ ಏಜೆನ್ಸಿಯು ನಿರ್ವಹಿಸಲಾದ ವರ್ಗೀಕರಿಸಲಾದ ದಾಖಲೆಗಳ ಮೌಲ್ಯ ನಿರ್ಧಾರ ಮತ್ತು ಕೆಳದರ್ಜೆಗೊಳಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯ ಅಥವಾ ಸಂಬಂಧಪಟ್ಟ ದಾಖಲೆ ಅಧಿಕಾರಿಯನ್ನು ಅಧಿಕೃತಗೊಳಿಸತಕ್ಕದ್ದು. ಅಂಥ ಕಚೇರಿ ಆದೇಶದ ಪ್ರತಿಯನ್ನು ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರಿಗೆ ಕಳುಹಿಸತಕ್ಕದ್ದು.
(೨) (೧)ನೇ ಉಪನಿಯಮದ ಮೇರೆಗೆ ಹಾಗೆ ಅಧಿಕೃತಗೊಂಡ ಅಧಿಕಾರಿಯು ದಾಖಲೆಗಳನ್ನು ಕೆಳದರ್ಜೆಗೆ ಇಳಿಸುವ ಉದ್ದೇಶಕ್ಕಾಗಿ ಪ್ರತಿ ಐದನೇ ವರ್ಷದಲ್ಲಿ ವರ್ಗೀಕರಿಸಲಾದ ದಾಖಲೆಗಳ ಮೌಲ್ಯ ನಿರ್ಣಯವನ್ನು, ಮಾಡತಕ್ಕದ್ದು
(೩) ಕೆಳದರ್ಜೆಗೆ ಇಳಿಸಿದ ತರುವಾಯ, ಅಧಿಕಾರಿಯು ಯಾವುದೇ ದಾಖಲೆಯನ್ನು ಖಾಯಂ ಸ್ವರೂಪದ ದಾಖಲೆ ಎಂದು ಘೋಷಿಸಿದರೆ, ಅದನ್ನು ಮೌಲ್ಯ ನಿರ್ಣಯದ ತರುವಾಯ, ಪತ್ರಾಗಾರ ಇಲಾಖೆ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿಯ ಮುಖ್ಯಸ್ಥರ ಬಳಿ ಇರತಕ್ಕದ್ದು ಮತ್ತು ಸಂರಕ್ಷಿಸತಕ್ಕದ್ದು.
(೪) ಈ ನಿಯಮದ ಮೇರೆಗೆ ಇಡಲಾದ ದಾಖಲೆಗಳನ್ನು ಯಾವುದೇ ಅಧಿಕೃತ ಉದ್ದೇಶಕ್ಕಾಗಿ ಕೋರಬಹುದು ಮತ್ತು ನಿಯಮ ೬ ರಲ್ಲಿ ಉಪಬಂಧಿಸಲಾದ ರೀತಿಯಲ್ಲಿ ಅವುಗಳನ್ನು ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರಿಗೆ ಹಿಂತಿರುಗಿಸತಕ್ಕದ್ದು.
(೫) ಪ್ರತಿವರ್ಷದ ಜೂನ್ ಮತ್ತು ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ, ವರ್ಗೀಕರಿಸಲಾದ ದಾಖಲೆಗಳ ಮೌಲ್ಯ ನಿರ್ಧಾರಣೆ ಮತ್ತು ಕೆಳದರ್ಜೆಗೆ ಇಳಿಸುವುದಕ್ಕಾಗಿ ಕೈಗೊಂಡ ಕ್ರಮದ ಬಗ್ಗೆ ಪತ್ರಾಗಾರ ಇಲಾಖಾ ನಿರ್ದೇಶಕರು ಅಥವಾ ಕಚೇರಿಯ ಮುಖ್ಯಸ್ಥರಿಗೆ (೧) ನೇ ಉಪನಿಯಮದ ಮೇರೆಗೆ ಅಧಿಕೃತಗೊಳಿಸಲಾದ ಅಧಿಕಾರಿಯ ಮೂಲಕ ನಮೂನೆ- ೪ ರಲ್ಲಿ ಅರ್ಧವಾರ್ಷಿಕ ವಿವರಣಾ ಪತ್ರವನ್ನು ಸಲ್ಲಿಸತಕ್ಕದ್ದು.
(೬) ೩ ನೇ ನಿಯಮದ ಮೇರೆಗೆ ನಾಮನಿರ್ದೇಶನಗೊಂಡ ದಾಖಲೆಗಳ ಅಧಿಕಾರಿಯು, ಪ್ರತಿಯೊಂದು ವರ್ಷದ ವಾರ್ಷಿಕ ವರದಿಯನ್ನು ಮುಂಬರುವ ವರ್ಷದ ಮಾರ್ಚ್ ತಿಂಗಳಲ್ಲಿ ನಮೂನೆ- ೫ ರಲ್ಲಿ ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಕಚೇರಿಯ ಮುಖ್ಯಸ್ಥರಿಗೆ ಸಲ್ಲಿಸತಕ್ಕದ್ದು.

 

೯. ಸಾರ್ವಜನಿಕ ದಾಖಲೆಗಳ ನಾಶ:

(೧) ಯಾವುದೇ ಸಾರ್ವಜನಿಕ ದಾಖಲೆಯನ್ನು ದಾಖಲು ಮಾಡದೆ ಮತ್ತು ಪುನುರವಲೋಕನ ಮಾಡದೆ ನಾಶಪಡಿಸತಕ್ಕದ್ದಲ್ಲ. ಪ್ರತಿ ವರ್ಷದ ಜನವರಿ ತಿಂಗಳಲ್ಲಿ, ದಾಖಲೆಗಳನ್ನು ಸೃಜಿಸುವ ಪ್ರತಿಯೊಂದು ಏಜೆನ್ಸಿಯು ನಮೂನೆ- ೬ ರಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳನ್ನು ಉಳಿಸಿಕೊಳ್ಳುವ ಅನುಸೂಚಿಯನ್ನು ನಾಶಪಡಿಸುವ ಅಥವಾ ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ
ಬಗ್ಗೆ ಎಲ್ಲಿ ಅಂಥ ಕಡತಗಳ ಉಲ್ಲೇಖ ಅಥವಾ ಸಮಾಲೋಚನೆ ತರುವಾಯ ದಾಖಲು ಮಾಡತಕ್ಕದ್ದು. ಈ ಕೆಲಸವನ್ನು ದಾಖಲೆಗಳ ಅಧಿಕಾರಿಯೊಂದಿಗೆ ಸಮಾಲೋಚನೆ ಮಾಡಿ ಪೂರ್ಣಗೊಳಿಸತಕ್ಕದ್ದು
(೨) ಇಪ್ಪತ್ತೈದು ವರ್ಷಗಳಿಗೂ ಮೀರದಂತೆ ಹಳೆಯದಾದ ಯಾವುದೇ ಸಾರ್ವಜನಿಕ ದಾಖಲೆಗಳನ್ನು, ಅದನ್ನು ಮೌಲ್ಯ ನಿರ್ಣಯ ಮಾಡಿದ ಹೊರತು ಯಾವುದೇ ದಾಖಲೆಗಳ ಸೃಜನಾ ಏಜೆನ್ಸಿಯು ನಾಶಪಡಿಸತಕ್ಕದ್ದಲ್ಲ.
(೩) ನಾಶಪಡಿಸಲು ಉದ್ದೇಶಿಸಲಾದಂತ ಎಲ್ಲ ಅಂಥ ಸಾರ್ವಜನಿಕ ದಾಖಲೆಗಳ ಒಂದು ಪಟ್ಟಿಯನ್ನು ದಾಖಲೆ ಸೃಜಿಸುವ ಏಜೆನ್ಸಿಯು ನಮೂನೆ- ೬ ರಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ಮುಂದಿನ ಪರಾಮರ್ಶೆಗಾಗಿ ಖಾಯಂ ಆಗಿ ಉಳಿಸಿಕೊಳ್ಳತಕ್ಕದ್ದು.
(೪) ದಾಖಲೆಗಳ ಅಧಿಕಾರಿಯು ನಮೂನೆ ೭ ರಲ್ಲಿ ದಾಖಲು ಮಾಡುವ ಸೂಚಿ ತಯಾರಿಸುವ ಪುನರವಲೋಕನೆಯನ್ನು ಮಾಡುವ ಮತ್ತು ಬೇಡದಿರುವುದನ್ನು ತೆಗೆದು ಹಾಕುವ ದಾಖಲೆಗಳ ಬಗ್ಗೆ ಅರ್ದವಾರ್ಷಿಕ ವರದಿಯನ್ನು ಪತ್ರಾಗಾರ ಇಲಾಖಾ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿಯ ಮುಖ್ಯಸ್ಥರಿಗೆ ಸಲ್ಲಿಸತಕ್ಕದ್ದು.
(೫) ದಾಖಲೆಗಳ ಅಧಿಕಾರಿಯ ಸಮ್ಮುಖದಲ್ಲಿ ದಾಖಲೆಗಳನ್ನು ಸುಟ್ಟುಹಾಕುವ ಅಥವಾ ಚೂರು ಚೂರಾಗಿ ಮಾಡುವ ಮೂಲಕವಾಗಲೀ ನಾಶಪಡಿಸತಕ್ಕದ್ದು.

 

೧೦. ಖಾಸಗಿ ಮೂಲಗಳಿಂದ ಸ್ವೀಕರಿಸಲಾದ ದಾಖಲೆಗಳ ಅಂಗೀಕಾರ:-

(೧) ದಾನ ಅಥವಾ ಖರೀದಿ ಅಥವಾ ಇತರ ರೀತಿಯಲ್ಲಿ ಖಾಸಗಿ ಮೂಲಗಳಿಂದ ಹೊಂದಿದ ದಾಖಲೆಗಳನ್ನು ದಾನ ನೀಡಿದವರು ವಿಧಿಸಿದ ಷರತ್ತುಗಳಿಗೊಳಪಟ್ಟು ಸದುದ್ದೇಶ ಸಂಶೋಧನೆಗೆ ಲಭ್ಯವಾಗುವಂತೆ ಮಾಡತಕ್ಕದ್ದು.
(೨) ಸಂಶೋಧನಾ ವಿದ್ವಾಂಸರು ದಾಖಲೆಗಳ ಪರಾಮರ್ಶನ ಅಥವಾ ಉಲ್ಲೇಖ ಮಾಡುವ ಅನುಮತಿಗಾಗಿ ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ನಮೂನೆ- ೮ ರಲ್ಲಿ ಅರ್ಜಿಯೊಂದನ್ನು ಸಲ್ಲಿಸತಕ್ಕದ್ದು. ಪತ್ರಾಗಾರ ಇಲಾಖೆಯ ನಿರ್ದೇಶಕರು ಸಮಾಲೋಚನ ಕಾಲದಲ್ಲಿ ಅಂಥ ದಾಖಲೆಯ ಸುರಕ್ಷೆಗೆ ಸಂಬಂಧಿಸಿದಂತೆ ಅರ್ಜಿದಾರನಿಂದ ಸೂಕ್ತವಾದ ನಷ್ಟ ಭರ್ತಿ ಬಂಧ ಪತ್ರ ಅಥವಾ ಭದ್ರತೆಯನ್ನು ಪಡೆದ ತರುವಾಯ ಸಾರ್ವಜನಿಕ ಹಿತದೃಷ್ಟಿಯಿಂದ ಅಂಥ ಅನುಮತಿಯನ್ನು ನೀಡಬಹುದು ಅಥವಾ ನಿರಾಕರಿಸಬಹುದು. ನಿರಾಕರಣೆಯ ಸಂದರ್ಭದಲ್ಲಿ ಅಂಥ ನಿರಾಕರಣೆಗೆ ಕಾರಣಗಳನ್ನು ಸದರಿ ಅರ್ಜಿಯ ಮೇಲೆ ದಾಖಲು ಮಾಡತಕ್ಕದ್ದು.
(೩) ಮೈಕ್ರೋಫಿಲ್ಮ್ ರೋಲುಗಳು, ಹಾರ್ಡ್ ಕಾಪಿಗಳು ಅಥವಾ ಯಾವುದೇ ಎಲೆಕ್ಟ್ರಾನಿಕ್ ನಮೂನೆಗಳು ಲಭ್ಯವಾದಾಗ ಮೂಲ ದಾಖಲೆಗಳನ್ನು ಸಂಶೋಧನಾ ವಿದ್ವಾಂಸರುಗಳಿಗೆ ಪರಾಮರ್ಶನೆ ಅಥವಾ ಉಲ್ಲೇಖಕ್ಕಾಗಿ ಒದಗಿಸತಕ್ಕದ್ದಲ್ಲ. ದಾಖಲೆಗಳ ಯಾವುದೇ ಪ್ರತಿಯನ್ನು ಪತ್ರಾಗಾರ ಇಲಾಖೆ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿಯ ಮುಖ್ಯಸ್ಥರ ಪೂರ್ವಾನುಮತಿ ಇಲ್ಲದೆ ನೀಡತಕ್ಕದ್ದಲ್ಲ.

 

೧೧. ಸಾರ್ವಜನಿಕ ದಾವೆಗಳಿಗೆ ಅಂಗೀಕಾರ-

(೧) ೫ ನೇ ನಿಯಮದ (೧) ನೇ ಉಪ ನಿಯಮದ ಮೇರೆಗೆ ಇಟ್ಟುಕೊಳ್ಳಲು ಮತ್ತು ಸಂರಕ್ಷಿಸಲು ಅಂಗೀಕರಿಸಲಾದ ಸಾರ್ವಜನಿಕ ದಾವೆಗಳನ್ನು ನಡ (೭)ರಲ್ಲಿ ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ಮಾಡಲಾದ ಅರ್ಜಿಯ ಮೇಲೆ ಸದುದ್ದೇಶ ಪರಾಮರ್ಶೆನೆ ಮತ್ತು ಸಂಶೋಧನೆಯ ಉದ್ದೇಶಗಳಿಗಾಗಿ ೧೨ ನೇ ಪ್ರಕರಣದ (೧)ನೇ ಉಪ ಪ್ರಕರಣದ ಉಪಬಂಧಗಳು ಮತ್ತು ಈ ಮುಂದಿನ ಷರತ್ತುಗಳಿಗೊಳಪಟ್ಟು ಲಭ್ಯವಾಗುವಂತೆ ಮಾಡತಕ್ಕದ್ದು, ಎಂದರೆ;-
(ಎ) ವ್ಯಕ್ತಿಯು ಸಾರ್ವಜನಿಕ ದಾಖಲೆಗಳನ್ನು ಆಧರಿಸಲು ಅಥವಾ ಪರಾಮರ್ಶಿಸಲು ಅರ್ಜಿಯನ್ನು ಸಲ್ಲಿಸಿದಾಗ ಪತ್ರಾಗಾರ ಇಲಾಖೆಯ ನಿರ್ದೇಶಕರು ಅಂಥ ದಾಖಲೆಯ ಪರಾಮರ್ಶಿಯ ಅವಧಿಯಲ್ಲಿ ಅಂಥ ದಾಖಲೆಯ ಸುರಕ್ಷೆಯ ಬಗ್ಗೆ ಅರ್ಜಿದಾರನಿಂದ ಸೂಕ್ತ ನಷ್ಟ ಭರ್ತಿ ಬಂಧ ಪತ್ರ ಅಥವಾ ಭದ್ರತೆಯನ್ನು ಪಡೆದುಕೊಂಡ ತರುವಾಯ, ಸದರಿ ಅರ್ಜಿಯ ಮೇಲೆ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಅರ್ಜಿಯನ್ನು ಅಂಗೀಕರಿಸಬಹುದು ಅಥವಾ ನಿರಾಕರಿಸಬಹುದು.
(ಬಿ) ಸಾರ್ವಜನಿಕ ದಾಖಲೆಗಳನ್ನು ಆಧರಿಸಲು ಅಥವಾ ಪರಾಮರ್ಶೆ ಮಾಡಲು ಇಚ್ಚಿಸಿ’ದ ವಿದೇಶಿಯರು, ಅವರನ್ನು ಪ್ರಾಯೋಜಿಸಿರುವ ಸಂಸ್ಥೆಗಳಿಂದ ಮತ್ತು ರಾಜತಾಂತ್ರಿಕ ನಿಯೋಗದಿಂದ ಪರಿಚಯದ ಪತ್ರವನ್ನು ಹಾಜರುಪಡಿಸಿದಾಗ ಮಾತ್ರ ಅನುಮತಿಸಬಹುದು.
(ಸಿ) ಪ್ರತಿಗಳನ್ನು ಪಡೆಯಲು ಇಚ್ಚಿಸಿದ ಯಾರೇ ಇತರ ವ್ಯಕ್ತಿಯ ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರಿಗೆ ಅಜಿ೯ಸಲ್ಲಿಸುವ ಮೂಲಕ ಹಾಗೆ ಮಾಡಬಹುದು.
(ಡಿ) ಮರುವಣ೯ನೆ (ರಿಪ್ರೂಗ್ರಾಫಿಕ್) ಮತ್ತು ಲಿಪ್ಯಂತರ ಮಾಡುವ ಸೌಲಭ್ಯಗಳು ಅರ್ಜಿಸಲ್ಲಿಸುವ ಆಧಾರದ ಮೇಲೆ ದೊರೆಯುವಂತೆ ಮಾಡಬಹುದು ಮತ್ತು ಅಂಥ ಸೇವೆಗಳಿಗಾಗಿ ಅರ್ಜಿದಾರನು ಪತ್ರಾಗಾರ ಇಲಾಖೆಯ ನಿರ್ದೇಶಕರು ಕಾಲಕಾಲಕ್ಕೆ ನಿಗದಿಪಡಿಸಿದಂತ ಅವಶ್ಯ ಶುಲ್ಕಗಳನ್ನು ಸಂದಾಯ ಮಾಡತಕ್ಕದ್ದು.
(ಇ) ಸಂಶೋಧನಾ ಉದ್ದೇಶಕ್ಕಾಗಿ ಸಾರ್ವಜನಿಕ ದಾಖಲೆಗಳನ್ನು ಆಧರಿಸುವ ಅಥವಾ ಪರಾಮರ್ಶಿಸುವ ವ್ಯಕ್ತಿ ಮತ್ತು ಸದರಿ ದಾಖಲೆಗಳಿಂದ ತೆಗೆದುಕೊಂಡ ವಿಷಯವನ್ನು ಆಧಾರದಿಂದ ಗ್ರಂಥವನ್ನು ಪ್ರಕಟಿಸಿದಲ್ಲಿ ಈ ಬಗ್ಗೆ ಕೃತಜ್ಞತೆಯನ್ನು ಸೂಚಿಸತಕ್ಕದ್ದು.
(ಎಫ್) ಯಾವುದೇ ಸಂದರ್ಭದಲ್ಲೂ ಯಾವುದೇ ದಾಖಲೆಗಳನ್ನು ಇಲಾಖೆಯಿಂದ ಹೊರಕ್ಕೆ ಕೊಂಡೊಯ್ಯತಕ್ಕದಲ್ಲ.
(೨) ಸಾರ್ವಜನಿಕ ದಾಖಲೆಗಳನ್ನು ಪರಾಮರ್ಶನ ಮಾಡಲು ಇಚ್ಛಿಸಿದ ವ್ಯಕ್ತಿಯು ಈ ಮುಂದಿನವುಗಳನ್ನು ಮಾಡತಕ್ಕದಲ್ಲ :-
(ಎ) ಸಾರ್ವಜನಿಕ ದಾಖಲೆಗಳನ್ನು ವಿರೂಪಗೊಳಿಸುವುದು ಅಥವಾ ಅವುಗಳ ಮೇಲೆ ಬರವಣಿಗೆ ಮಾಡುವುದು ಮತ್ತು ಯಾವುದೇ ಗುರುತುಗಳು ಅಥವಾ ಸೂಚನೆಗಳನ್ನು ಹಾಕುವುದು.
(ಬಿ) ಸಾರ್ವಜನಿಕ ದಾಖಲೆಗಳನ್ನು ಮಡಚುವುದು, ಹರಿದು ಹಾಕುವುದು, ಕತ್ತರಿಸುವುದು, ಸುಕ್ಕು ಮಾಡುವುದು ಅಥವಾ ಅನ್ಯಥಾ ಹಾನಿಗೊಳಿಸುವುದು ಅಥವಾ ನಿರುಪಯುಕ್ತಗೊಳಿಸುವುದು.
(ಸಿ) ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರ ಅನುಮತಿಯನ್ನು ಪಡೆದುಕೊಳ್ಳದೆ ಯಾವುದೇ ಸಾರ್ವಜನಿಕ ದಾಖಲೆಯನ್ನು ತೆಗೆದುಹಾಕುವುದು.
(ಡಿ) ಸಾರ್ವಜನಿಕ ದಾಖಲೆಗಳನ್ನು ಆಧಾರಿಸುವಾಗ ಅಥವಾ ಪರಾಮರ್ಶನ ಮಾಡುವಾಗ ಯಾವುದೇ ತಿನಿಸುಗಳು ಅಥವಾ ಪಾನೀಯ ವಸ್ತುಗಳನ್ನು ಸೇವಿಸುವುದು ಅಥವಾ ಧೂಮಪಾನ ಮಾಡುವುದು.
(ಇ) ಸದರಿ ದಾಖಲೆಗಳ ಯಾವುದೇ ಪ್ರತಿಯನ್ನು ತೆಗೆದುಕೊಳ್ಳುವ ಉದ್ದೇಶದಿಂದ ಯಾವುದೇ ಸಾರ್ವಜನಿಕ ದಾಖಲೆಗಳ ಮೇಲೆ ಯಾವುದೇ ಸಾಧನ ಸಾಮಗ್ರಿ ಅಥವಾ ವಸ್ತುವನ್ನು ಇಡುವುದು.
(ಎಫ್) ಸಾರ್ವಜನಿಕ ದಾಖಲೆಗಳನ್ನು ಆಧರಿಸುವಾಗ ಅಥವ ಪರಾಮರ್ಶನ ಮಾಡುವಾಗ ಯಾರೇ ಇತರ ವ್ಯಕ್ತಿಗೆ ತೊಂದರೆ ಅಥವಾ ಅಡ್ಡಿ ಉಂಟುಮಾಡುವುದು.
(ಜಿ) ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿಯ ಮುಖ್ಯಸ್ಥರು ಸಾರ್ವಜನಿಕ ದಾಖಲೆಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ನಿರ್ಧರಣೆ ಮಾಡಿದಂತೆ ವಿವೇಚನೆಯ ಅನುಸಾರದ ರೀತಿಯಲ್ಲೇ ವರ್ತಿಸಬೇಕು.

 

೧೨. ಸರ್ಕಾರೇತರ ಸದಸ್ಯರುಗಳಿಗೆ ಪಾವತಿಸಬೇಕಾದ ಭತ್ಯೆಗಳು:-

ಈ ಅಧಿನಿಯಮದ ೧೩ ನೇ ಪ್ರಕರಣದ (೧)ನೇ ಉಪ ಪ್ರಕರಣದ ಮೇರೆಗೆ ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡಿದ ಪತ್ರಾಗಾರ ಸಲಹಾ ಮಂಡಳಿಯ ಸರ್ಕಾರೇತರ ಸದಸ್ಯರುಗಳು ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಅನುಬಂಧ- ಎ ಪ್ರಕಾರ ಚಾಲ್ತಿಯಲ್ಲಿರುವ ದರಗಳಲ್ಲಿ ಪ್ರಯಾಣಭತ್ಯೆ ಮತ್ತು ದಿನಭತ್ಯೆಯನ್ನು ಪಡೆಯಲು ಅರ್ಹರಾಗಿರತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಅದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಯು.ಬಿ.ಉಳವಿ)
ಸರ್ಕಾರದ ಉಪಕಾರ್ಯದರ್ಶಿ
ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ.

ಗೆ,
ಸಂಕಲನಕಾರರು ಕರ್ನಾಟಕ ರಾಜ್ಯಪತ್ರ, ಕೆಂಗೇರಿ, ಬೆಂಗಳೂರು ಮುಂದಿನ ರಾಜ್ಯ ಪತ್ರದ ಸಂಚಿಕೆಯಲ್ಲಿ ಪ್ರಕಟಿಸುವುದು
ಪ್ರತಿ:
೧) ಮಹಾಲೇಖಪಾಲರು (ಎ ಮತ್ತು ಇ) ಕರ್ನಾಟಕ ಬೆಂಗಳೂರು.
೨) ಸರ್ಕಾರದ ಮುಖ್ಯ ಕಾರ್ಯಾದರ್ಶಿ ವಿಧಾನಸೌಧ ಬೆಂಗಳೂರು.
೩) ನಿರ್ದೇಶಕರು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ವಿಕಾಸ ಸೌಧ, ಬೆಂಗಳೂರು.
೪) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು.
೫) ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು.
೬) ಮಾನ್ಯ ರಾಜ್ಯಪಾಲರ ಕಾರ್ಯದರ್ಶಿಯವರು, ರಾಜಭವನ. ಬೆಂಗಳೂರು.
೭) ನಿವಾಸಿ ಆಯುಕ್ತರು, ಕರ್ನಾಟಕ ಭವನ, ಕೌಟಿಲ್ಯ ಮಾರ್ಗ, ಚಾಣಕ್ಯಪುರಿ, ನವದೆಹಲಿ –

೧೧೦೦೧೧.
೮) *ರಿಜಿಸ್ಟರ್ ಜನರಲ್ ಕರ್ನಾಟಕ ಉಚ್ಛನ್ಯಾಯಾಲಯ, ಬೆಂಗಳೂರು.
೯) *ರಿಜಿಸ್ಟರ್ ಕರ್ನಾಟಕ ಲೋಕಾಯುಕ್ತ ಬೆಂಗಳೂರು.
೧೦) *ರಿಜಿಸ್ಟರ್ ಕರ್ನಾಟಕ ಅತ್ಯಂತ ನ್ಯಾಯ ಮಂಡಳಿ, ಇಂದಿರಾನಗರ, ಬೆಂಗಳೂರು.
೧೧) *ಕಾರ್ಯದರ್ಶಿ ಕರ್ನಾಟಕ ಲೋಕಸೇನಾ ಆಯೋಗ, ಬೆಂಗಳೂರು.
೧೨) *ಪ್ರಧಾನ ಕಾರ್ಯದರ್ಶಿ ಕರ್ನಾಟಕ ವಿಧಾನಸಭೆ/ವಿಧಾನಪರಿಷತ್ತು, ವಿಧಾನಸೌಧ,

ಬೆಂಗಳೂರು.
೧೩) ಎಲ್ಲಾ ಇಲಾಖೆ ಮುಖ್ಯಸ್ಥರುಗಳು.
೧೪) ಎಲ್ಲಾ ಪ್ತಾದೇಶಿಕ ಆಯುಕ್ತರು.
೧೫) ಎಲ್ಲಾ ಜಿಲ್ಲಾಧಿಕಾರಿಗಳು/ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,

ಜಿಲ್ಲಾಪಂಚಾಯತ್.
೧೬) ಮುಖ್ಯಮಂತ್ರಿಯವರ ಕಾರ್ಯದರ್ಶಿ, ವಿಧಾನಸೌಧ, ಬೆಂಗಳೂರು.
೧೭) ಸರ್ಕಾರದ ಎಲ್ಲಾ ಅಪರ/ ಜಂಟಿ/ ಉಪ/ ಅಧೀನ ಕಾರ್ಯದರ್ಶಿಗಳು.
೧೮) ಸಚಿವಾಲಯದ ಎಲ್ಲಾ ಶಾಖಾಧಿಕಾರಿಗಳು.
೧೯) ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ

ಆಪ್ತಕಾರ್ಯದರ್ಶಿ ವಿಧಾನಸೌಧ, ಬೆಂಗಳೂರು.
೨೦) ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ ಕನ್ನಡ ಸಂಸ್ಕೃತಿ ಮತ್ತು

ವಾರ್ತಾ ಇಲಾಖೆ ವಿಕಾಸಸೌಧ, ಬೆಂಗಳೂರು.
೨೧) ಸರ್ಕಾರದ ಉಪ ಕಾರ್ಯದರ್ಶಿಯವರ ಆಪ್ತ ಸಹಾಯಕಿ ಕನ್ನಡ ಸಂಸ್ಕೃತಿ ಮತ್ತು

ವಾರ್ತಾ ಇಲಾಖೆ ವಿಕಾಸಸೌಧ, ಬೆಂಗಳೂರು.
೨೨) ಸಮನ್ವಯ ಶಾಖೆ/ ಶಾಖಾ ರಕ್ಷಾ ಕಡತ/ ಬಿಡಿ ಪ್ರತಿ:

(*ಮುಖಪತ್ರದೊಂದಿಗೆ).

 

ನಮೂನೆ- ೧

(೫ನೇ ನಿಯಮದ (೨) ನೇ ಉಪ ನಿಯಮವನ್ನು ನೋಡಿ)
ಸಾಲಿನಲ್ಲಿ ಮೌಲ್ಯನಿರ್ಣಯಕ್ಕಾಗಿ ಬಾಕಿ ಇರುವ ಖಾಯಂ ಸ್ವರೂಪದ ದಾಖಲೆಗಳ ವಿವರಗಳು

ದಾಖಲೆಗಳ ಸೃಜನಾ ಏಜೆನ್ಸಿಗಳು ದಾಖಲೆ ಕೊಠಡಿಗಳಲ್ಲಿ ಇಟ್ಟಿರುವ ’ಎ’ ಪ್ರವರ್ತದ ಕಡತಗಳ ಒಟ್ಟು ಸಂಖ್ಯೆ — ವರದಿಯ ವರ್ಷದಲ್ಲಿ ಶಾಖೆಗಳಿಂದ ದಾಖಲೆ ಕೊಠಡಿಗಳಿಗೆ ವರ್ಗಾಯಿಸಿದ ‘ಎ’ ಪ್ರವರ್ಗದ ಕಡತಗಳ ಒಟ್ಟು ಸಂಖ್ಯೆ — ಅಂಕಣ ೧ ಮತ್ತು ೨ ರಲ್ಲಿ ಉಲ್ಲೇಖಿಸಲಾದ ಕಡತಗಳ ಒಟ್ಟು ಸಂಖ್ಯೆ — ಮೌಲ್ಯ ನಿರ್ಣಯಕ್ಕಾಗಿ ಬಾಕಿ ಇರುವ ಕಡತಗಳ ಒಟ್ಟು ಸಂಖ್ಯೆ — ಷರಾಗಳು ಏನಾದರೂ ಇದ್ದರೆ.
೧ — ೨ — ೩ — ೪ — ೫.

 

 

ನಮೂನೆ- ೨

(೫ನೇ ನಿಯಮದ (೩) ನೇ ಉಪ ನಿಯಮವನ್ನು ನೋಡಿ)
ವರ್ಗಾವಣೆ ಪಟ್ಟಿ
ಪಟ್ಟಿ — ದಾಖಲೆ ಕಡತಗಳ ರಿಜಿಸ್ಟರು ದ್ವಿಪ್ರತಿಯಲ್ಲಿ ಸಿದ್ಧಪಡಿಸಬೇಕು
____________ ಇಲಾಖೆ ____________ ವಿಭಾಗ
ಸಾಮಾನ್ಯ ದಾಖಲೆಗಳ ಶಾಖೆಗೆ ಕಳುಹಿಸಿದ ದಿನಾಂಕ ___________ ವರ್ಗೀಕರಣ _________

ದಾಖಲೆಗಳ ಸೃಜನಾ ಏಜನ್ಸಿಯು ಭರ್ತಿ ಮಾಡಬೇಕು — ಸಾಮಾನ್ಯ ದಾಖಲೆ ವಿಭಾಗವು ಭರ್ತಿ ಮಾಡಬೇಕು.
ಕ್ರ ಸಂ — ಕಡತ (ಸಂಗ್ರಹಣೆ) ಸಂಖ್ಯೆ — ದಾಖಲು ಮಾಡುವ ದಿನಾಂಕ — ಬಂಡಲ್ಗಳನ್ನು ಇಡುವ ಕಪಾಟಿಗೆ ದಾಖಲೆಗಳನ್ನು ಇರಿಸಿದ ನೌಕರರ ಹೆಸರು ಹಾಗೂ ದಿನಾಂಕ — ಷರಾಗಳು.
೧ — ೨ — ೩ — ೪ — ೫.

 

ನಮೂನೆ- ೩

(೬ನೇ ನಿಯಮದ (೩) ನೇ ಉಪ ನಿಯಮವನ್ನು ನೋಡಿ)

೧. ಕಡತ ಸಂಖ್ಯೆ/ ಆದೇಶದ ಸಂಖ್ಯೆ:
೨. ಕ್ರಮ ಸಂಖ್ಯೆ:
೩. ಯಾವ ದಿನಚರಿ ಅಥವಾ ಕಡತ ಸಂಖ್ಯೆಗೆ ಒಪ್ಪಿಸಬೇಕಾಗಿದೆ:
೪. ಕೋರಿಕೆ ಸಲ್ಲಿಸುವ ವ್ಯಕ್ತಿಯ ಹೆಸರು (ಬಿಡಿ ಅಕ್ಷರಗಳಲ್ಲಿ):
೫. ಕೋರಿಕೆ ಸಲ್ಲಿಸುವ ವ್ಯಕ್ತಿಯ ಸಹಿ:
೬. ಪದನಾಮ:
೭. ಇಲಾಖೆ:
೮. ಶಾಖೆ:
೯. ಮೇಲುರುಜು:
೧೦. ಪದನಾಮ:
“ಗೌಪ್ಯ”, “ಅತಿ ಗೌಪ್ಯ” ಕಾಗದ ಪತ್ರಗಳ ಸಂದರ್ಭದಲ್ಲಿ ಉಪ ಕಾರ್ಯದರ್ಶಿಯವರ ಮೇಲು ರುಜು ಅವಶ್ಯಕವಾಗಿರುತ್ತದೆ.
ಸೂಚನೆ: ಅನ್ಯ ಇಲಾಖೆಗೆ ಸೇರಿದ ಕಡತಕ್ಕಾಗಿ ಕೋರಿಕೆ ಪತ್ರ ಸಲ್ಲಿಸಿರುವಲ್ಲಿ ಕಡತವು ಯಾವ ಇಲಾಖೆಗೆ ಸಂಬಂಧಿಸಿದೆಯೋ ಆ ಇಲಾಖೆಯ ಅನುಮತಿಯನ್ನು ಪಡೆದಿರತಕ್ಕದ್ದು.

 

 

ನಮೂನೆ -೪

(೮ನೆ ನಿಯಮದ (೫)ನೇ ಉಪ ನಿಯಮವನ್ನು ನೋಡಿ)
ವರ್ಗೀಕರಿಸಲಾದ ದಾಖಲೆಗಳ ನಿಯತಕಾಲಿಕ ಪುನರವಲೋಕನದ ಮೇಲೆ ಅರ್ಧವಾರ್ಷಿಕ ವಿವರಣಾ ಪಟ್ಟಿ

ಸಂಸ್ಥೆಯ ಪ್ರಸ್ತುತ ಇಟ್ಟಿರುವ ವರ್ಗೀಕೃತ ದಾಖಲೆಗಳ ಸಂಖ್ಯೆ — ಪುನರವಲೋಕನಕ್ಕಾಗಿ ಬಾಕಿ ಇರುವ ವರ್ಗೀಕೃತ ದಾಖಲೆಗಳ ಸಂಖ್ಯೆ — ವರದಿಯ ವರ್ಷದಲ್ಲಿ ಪುನರವಲೋಕನ ಮಾಡಿದ ಮತ್ತು ಕೆಳದರ್ಜೆಗೆ ಇಳಿಸಿದ ಸಂಖ್ಯೆ — ಷರಾಗಳು.

 

ನಮೂನೆ- ೫

ಪತ್ರಾಗಾರ ಇಲಾಖೆಯ ನಿರ್ದೇಶಕರು/ ಇಲಾಖಾ ಮುಖ್ಯಸ್ಥರಿಗೆ ವಾರ್ಷಿಕ ವರದಿಯ ಸಲ್ಲಿಕೆಗಾಗಿ
ನಮೂನೆ
(೮ನೇ ನಿಯಮದ (೬) ನೇ ಉಪನಿಯಮ ನೋಡಿ)

೧. ಎ. ವ್ಯವಸ್ಥಿತವಾದ ಇಲಾಖಾ ದಾಖಲೆಗಳ ಕೊಠಡಿಯನ್ನು ಸ್ಥಾಪಿಸುವುದು- ನಿಮ್ಮ ಸಂಸ್ಥೆಯು ವ್ಯವಸ್ಥಿತವಾದ ದಾಖಲೆಗಳ ಕೊಠಡಿಯನ್ನು ಸ್ಥಾಪಿಸಿದೆಯೇ? ಹಾಗಿದ್ದರೆ, ಸಾಕಷ್ಟು ಸ್ಥಳ ಇರುವಿದೇ?
ಬಿ. ದಾಖಲೆಗಳ ಅಧಿಕಾರಿಗಳ ನಾಮನಿರ್ದೇಶನ- ನಿಮ್ಮ ಸಂಸ್ಥೆಯು ಇಲಾಖಾ ದಾಖಲೆಗಳ ಅಧಿಕಾರ ಎಂದು ಅಧಿಕಾರಿಯನ್ನು ನಾಮನಿರ್ದೇಶನ ಮಾಡಿರುವುದೇ?ಮಾಡಿಲ್ಲದಿದ್ದರೆ ಕಾರಣಗಳೇನು?
ಸಿ. ದಾಖಲೆಗಳ ಅಧಿಕಾರಿ ಹಾಗೂ ಸಿಬ್ಬಂಧಿಯ ತರಬೇತಿ.
(i) ಇಲಾಖಾ ದಾಖಲೆಗಳ ಅಧಿಕಾರಿಯು ದಾಖಲೆಗಳ ನಿರ್ವಹಣೆ ಬಗ್ಗೆ ತರಬೇತಿಯನ್ನು ಪಡೆದಿರುವರೇ?
(ii) ಇಲಾಖಾ ದಾಖಲೆಗಳ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಸಿಬ್ಬಂದಿಯು ವಿವಿಧ ಅಂಶಗಳು ಅಥವಾ ದಾಖಲೆಗಳ ನಿರ್ವಹಣೆಯ ಬಗ್ಗೆ ತರಬೇತಿ ಪಡೆದಿರುವರೇ?
(iii) ಪಡೆದಿಲ್ಲದಿದ್ದರೆ, ಸಂಬಂಧಪಟ್ಟ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಈಗಿರುವ ತರಬೇತಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಚ್ಛಿಸುವಿರಾ
೨. ನಿಯತಕಾಲಿಕವಾಗಿ ದಾಖಲು ಮಾಡುವುದು, ಪರಿಶೀಲನೆ ಮಾಡುವುದು ಹಾಗೂ ಅರೆ- ಚಾಲ್ತಿ ದಾಖಲೆಗಳನ್ನು ತೆಗೆದುಹಾಕುವುದು:-
(i) ನಿಮ್ಮ ಸಂಸ್ಥೆಯು ಖಾಯಂ ಅಲ್ಲದ ದಾಖಲೆಗಳನ್ನು ಇಡಲು, ಪರಿಶೀಲಿಸಲು ಹಾಗೂ ತೆಗೆದು ಹಾಕಲು ಕ್ರಮಗಳನ್ನು ಕೈಗೊಂಡಿದೆಯೇ?
(ii) ವರದಿಯ ವರ್ಷದಲ್ಲಿ ದಾಖಲು ಮಾಡಿದ, ಪರಿಶೀಲಿಸಿದ ಹಾಗೂ ತೆಗೆದುಹಾಕಲಾದ ದಾಖಲೆಗಳ ಒಟ್ಟು ಸಂಖ್ಯೆಯನ್ನು ಸೂಚಿಸಿ.
೩. ಚಾಲ್ತಿರಹಿತ ದಾಖಲೆಯ ಮೌಲ್ಯ ನಿರ್ಣಯ:-
(i) ನಿಮ್ಮ ಸಂಸ್ಥೆಯು, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯೊಂದಿಗೆ ಮೌಲ್ಯ ನಿರ್ಣಯ ಮಾಡಿದ ಚಾಲ್ತಿ ರಹಿತ ದಾಖಲೆಗಳನ್ನು ಪಡೆದುಕೊಳ್ಳಲು ಕ್ರಮವನ್ನು ಆರಂಭಿಸಿರುವುದೇ?
(ii) ಮೌಲ್ಯ ನಿರ್ಣಯಕ್ಕಾಗಿ ಇರುವ ದಾಖಲೆಗಳ ಇಡಿ ಪ್ರಮಾಣವನ್ನು ತಿಳಿಸಿ.
೪. ದಾಖಲೆಗಳನ್ನು ಉಳಿಸಿಕೊಳ್ಳುವ ಅನುಸೂಚಿಯ ಸಂಕಲನ/ ಪರಿಷ್ಕರಣೆ:-
(i) ನಿಮ್ಮ ಸಂಸ್ಥೆಯು, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯೊಂದಿಗೆ ಸಮಾಲೋಚಿಸಿ ಖಾಯಂ ಪ್ರಕಾರ್ಯಗಳ ದಾಖಲೆಗಳ ಉಳಿಸಿಕೊಳ್ಳುವ ಅನುಸೂಚಿಯನ್ನು ಸಂಕಲನ ಮಾಡಿರುವುದೇ? ಇಲ್ಲದಿದ್ದರೆ ನೀವು ಕೈಗೊಳ್ಳಲು ಉದ್ದೇಶಿಸಿದ ಕ್ರಮವೇನು?
(ii) ನಿಮ್ಮ ಸಂಸ್ಥೆಯು, ಐದು ವರ್ಷಗಳ ನಂತರ ಮೇಲಿನ ಅನುಸೂಚಿಯನ್ನು ಪರಿಷ್ಕರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆಯೇ?
೫. ವರ್ಗೀಕೃತ ದಾಖಲೆಗಳ ನಿಯತಕಾಲಿಕ ಪರಿಶೀಲನೆ:-
(i) ನಿಮ್ಮ ಸಂಸ್ಥೆಯು ವರದಿಯ ವರ್ಷದಲ್ಲಿ ವರ್ಗೀಕೃತ ದಾಖಲೆಗಳನ್ನು ಮತ್ತೆ ವರ್ಗೀಕರಿಸಿರುವುದೇ?
(ii) ಇಲ್ಲದಿದ್ದರೆ ಕಾರಣಗಳೇನು?
೬. ದಾಖಲೆಗಳ ವಾರ್ಷಿಕ ಸೂಚಿಗಳ ಸಂಕಲನ:-
(i) ನಿಮ್ಮ ಸಂಸ್ಥೆಯು ವಾರ್ಷಿಕ ಸೂಚಿಗಳನ್ನು ಸಂಕಲನ ಮಾಡಿರುವುದೇ?
(ii) ಸಂಚಿಕೆಗಳ ಹೆಸರಿನೊಂದಿಗೆ ಸೇರಿರುವ ವರ್ಷಗಳನ್ನು ತಿಳಿಸುವುದು.
೭. ಸಾಂಸ್ಥಿಕ ವಿವರದ ಸಂಕಲನ:-
ನಿಮ್ಮ ಸಂಸ್ಥೆಯು, ತನ್ನ ಸ್ಥಾಪನೆಯ ದಿನಾಂಕದೊಂದಿಗೆ ವಿವಿಧ ಕಾರ್ಯಗಳನ್ನು ಬಿಂಬಿಸುವ ಸಾಂಸ್ಥಿಕ ವಿವರದ ಸಂಕಲನ ಮಾಡಿರುವುದೆ? ಹಾಗಿದ್ದರೆ, ಅದರ ಒಂದು ಪ್ರತಿಯನ್ನು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಗೆ ಒದಗಿಸುವುದು.
೮. ನಿಷ್ಕ್ರಿಯ ಮಂಡಳಿಗಳದಾಖಲೆಗಳು:-
(i) ನಿಮ್ಮ ಸಂಸ್ಥೆಯು. ನಿಷ್ಕ್ರಿಯ ಮಂಡಳಿಗಳ ದಾಖಲೆಗಳನ್ನು ಪಡೆದುಕೊಂಡಿದೆಯೇ? ವಿವರಗಳನ್ನು ನೀಡಿ.
(ii) ಹಾಗಿದ್ದರೆ, ಅವುಗಳನ್ನು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಗೆ ವರ್ಗಾಯಿಸಲು ಕೈಗೊಂಡಿರುವ ಕ್ರಮವೇನು?

ನಮೂನೆ- ೬

(೯ನೇ ನಿಯಮದ (೧) ಮತ್ತು (೩) ನೇ ಉಪ ನಿಯಮವನ್ನು ನೋಡಿ)
ಅವಧಿ ಮೀರಿದ ದಾಖಲೆಗಳನ್ನು ನಾಶ ಮಾಡುವ – ಸಂರಕ್ಷಿಸುವ ರಿಜಿಸ್ಟರ್

ಕ್ರಮ ಸಂಖ್ಯೆ — ಕಡತದ ಸಂಖ್ಯೆ — ವರ್ಷ — ವಿಷಯ — ಸಂಬಂಧಪಟ್ಟ ಇಲಾಖೆ/ ಶಾಖೆ — ವರ್ಷದಲ್ಲಿ ನಾಶಪಡಿಸಲಾದ ಅಥವಾ ನಾಶಪಡಿಸಲು ಇಟ್ಟುಕೊಂಡಿರುವುದು– ಶಾಖಾಧಿಕಾರಿಯ ಚಿಕ್ಕ ರುಜು ಮತ್ತು ದಿನಾಂಕ.

೧ — ೨ — ೩ — ೪ — ೫ — ೬ — ೭

 

 

ನಮೂನೆ- ೭

(೯ನೇ ನಿಯಮದ (೪)ನೇ ಉಪ ನಿಯಮವನ್ನು ನೋಡಿ)
ಅರ್ಧ ವರ್ಷಕ್ಕೆ ಕೊನೆಗೊಳ್ಳುವ ದಾಖಲೆಗಳನ್ನು ಮಾಡುವ, ಅನುಸೂಚಿ ತಯಾರಿಸುವ,
ಪುನರವಲೋಕ ಮಾಡುವ ಮತ್ತು
ದಾಖಲೆಗಳ ನಾಶಪಡಿಸುವ ಬಗ್ಗೆ ಅರ್ಧವಾರ್ಷಿಕ ವರದಿ

ಕ್ರಮ ಸಂಖ್ಯೆ — ದಾಖಲು ಮಾಡಲಾದ ಕಡತಗಳ ಒಟ್ಟು ಸಂಖ್ಯೆ — ಸೂಚಿ ತಯಾರಿಸಲಾದ ಕಡತಗಳ ಒಟ್ಟು ಸಂಖ್ಯೆ — ಪುನರಾವಲೋಕನ ಮಾಡಿದ ಕಡತಗಳ ಒಟ್ಟು ಸಂಖ್ಯೆ — ನಾಶಪಡಿಸಲಾದ ಕಡತಗಳು ಯಾವುವಾದರೂ ಇದ್ದರೆ ಆ ಕಡತಗಳ ಒಟ್ಟು ಸಂಖ್ಯೆ — ಷರಾಗಳು.
೧ — ೨ — ೩ — ೪ — ೫ — ೬.

 

ನಮೂನೆ ಸಂಖ್ಯೆ ೮

[೧೦ ನೇ ನಿಯಮದ (೨) ನೇ ಉಪನಿಯಮವನ್ನು ನೋಡಿ]
ಕನಾ೯ಟಕ ರಾಜ್ಯ ಪತ್ರಾಗಾರ ಇಲಾಖೆ
(ಅನುಬಂಧ ’ಎ’
, ನಿಯಮ ಸಂಖ್ಯೆ ೧೦)
ಐತಿಹಾಸಿಕ ದಾಖಲೆಗಳನ್ನು ಪರಾಮರ್ಶನ ಮಾಡಲು ಅನುಮತಿಗಾಗಿ ಅರ್ಜಿ
(ದ್ವಿಪ್ರತಿಯಲ್ಲಿ ಸಲ್ಲಿಸಬೇಕು)

ಗೆ
ನಿರ್ದೇಶಕರು
ಕರ್ನಾಟಕ ರಾಜ್ಯ ಪತ್ರಾಗಾರ
ಕೊಠಡಿ ಸಂ ೧೨೫, ೧ನೇ ಮಹಡಿ,
ವಿಕಾಸಸೌಧ, ಬೆಂಗಳೂರು – ೫೬೦೦೦೧

ಮಾನ್ಯರೆ,
ಸದುದ್ದೇಶದ ಸಂಶೋಧನೆಗಾಗಿ ಮುಕ್ತವಾಗಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಐತಿಹಾಸಿಕ ದಾಖಲೆಗಳನ್ನು ಪರಾಮರ್ಶನ ಮಾಡಲು ಅನುಮತಿಯನ್ನು ಕೋರುತ್ತೇನೆ. ನಾನು, ಕಾಲಕಾಲಕ್ಕೆ ಜಾರಿಯಲ್ಲಿರುವ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಲು ಬದ್ಧನಾಗಿದ್ದೇನೆ.

೧. ಪೂರ್ಣ ಹೆಸರು (ಬಿಡಿ ಅಕ್ಷರಗಳಲ್ಲಿ)
೨. ತಂದೆಯ/ ಗಂಡನ ಹೆಸರು
೩. ವಯಸ್ಸು ಮತ್ತು ಹುಟ್ಟಿದ ದಿನಾಂಕ
೪. ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಿಶಿಷ್ಟ ಸಾಧನೆಗಳು ಮತ್ತು ಪ್ರಕಟಣೆಗಳು
೫. ವೃತ್ತಿ
೬. ರಾಷ್ಟ್ರೀಯತೆ ಮತ್ತು ವಾಸಸ್ಥಳ
೭. ವಿಳಾಸ ಪತ್ರ ವ್ಯವಹಾರ ಮತ್ತು ಕಾಯಂ
೮. ಸಂಶೋಧನೆಯ ವಿಷಯ
೯. ಯಾವ ಅವಧಿಗೆ ಅನುಮತಿ ಕೋರಲಾಗಿದೆ
೧೦. ಸಂಶೋಧನೆಯ ಉದ್ದೇಶ ಮತ್ತು ಯಾವ ಸಂಶೋಧನಾ ಸಂಸ್ಥೆಯೊಂದಿಗೆ ಸಂಯೋಜನೆಯಾಗಿರುತ್ತದೆ.
೧೧. ಉಲ್ಲೇಖ ಮತ್ತು ಒದಗಿಸಲಾಗಿರುವ ಪ್ರಮಾಣಪತ್ರ
ಸಂಶೋಧನಾ ವಿದ್ಯಾರ್ಥಿಯ ಸಹಿ

ಟಿಪ್ಪಣಿ: ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳು ಸಂಬಂಧಿಸಿದ ಪ್ರಾದ್ಯಾಪಕರ, ಶಿಫಾರಸ್ಸಿನೊಂದಿಗೆ ತಮಗೆ ಸಂಬಂಧಪಟ್ಟ ವಿಭಾಗಗಳ ಮೂಲಕ ಅರ್ಜಿಯನ್ನು ಸಲ್ಲಿಸತಕ್ಕದ್ದು. ಶೈಕ್ಷಣಿಕ ಸಂಸ್ಥೆಗಳಲ್ಲಿ ಉದ್ಯೋಗಸ್ಥ ವ್ಯಕ್ತಿಗಳು ತಮ್ಮ ಅರ್ಜಿಗಳನ್ನು ಸಂಸ್ಥೆಗಳ ಮುಖ್ಯಸ್ಥರ ಮೂಲಕ ಸಲ್ಲಿಸಬೇಕು.
ದಾಖಲೆಗಳನ್ನು ಪರಾಮರ್ಶನ ಮಾಡಲು ಇಚ್ಛಿಸುವ ವಿದೇಶಿಯರು ಭಾರತದಲ್ಲಿನ ತಮ್ಮ ರಾಜ್ಯ ತಾಂತ್ರಿಕ ಪ್ರತಿನಿಧಿಯ ಮೂಲಕ ಪರಿಚಯ ಪತ್ರವನ್ನು ಹಾಜರುಪಡಿಸಬೇಕು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಯು.ಬಿ.ಉಳವಿ)
ಸರ್ಕಾರದ ಉಪಕಾರ್ಯದರ್ಶಿ
ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ.