ಕಟ್ಟಡ ಸಂಹಿತೆಯ ಸಂಕ್ಷಿಪ್ತ ಮಾಹಿತಿ

ಲೇಖಕರು: ಸಿದ್ದೇಶ್ ಕೆ, ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಜೇಂದ್ರಘಡ ತಾಲ್ಲೂಕು, ಗದಗ್ ಜಿಲ್ಲೆ.
mobile: 9686018201
ಮನವಿ: ಈ ಲೇಖನವು ನಾಳೆಯ ದಿನಗಳಿಗೆ ಅಭಿಯಾನಕ್ಕೆ ಪ್ರೇರಣೆ ನೀಡಬಲ್ಲ ಶಕ್ತಿಯಾಗಿದ್ದು, ನೀವು ಕಾರ್ಯನಿರ್ವಹಿಸುತ್ತಿರುವ ಕಛೇರಿಯ ಕಟ್ಟಡ ಕಾಮಗಾರಿಯ ಗುತ್ತಿಗೆದಾರರಿಗೆ ಹಾಗೂ ನಿಮಗೆ ಪರಿಚಯವಿರುವವರು ಕಟ್ಟಡ ನಿರ್ಮಾನಗಳ ಕಸುಬಲ್ಲಿದ್ದರೆ ಅವರಿಗೆ ಮಾಹಿತಿ ನೀಡುವ ಮೂಲಕ ವಿಶೇಷ ಚೇತನರಿಗೆ ಅನುವಾಗುವ ಮನೆಗಳನ್ನು ಕಟ್ಟಲು ಹುರುಪು ತುಂಬುವಂತೆ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ.

ಪೀಠಿಕೆ:- ಮಾನವ ಭೂಮಿಯ ಮೇಲೆ ನಾಗರೀಕ ಜೀವನ ಮಾಡಲು ಆರಂಭಿಸಿದಾಗಿನಿಂದ ಸಹಜೀವಿಗಳೊಂದಿಗೆ ತಾರತಮ್ಯ ಮಾಡುವುದು ಸಾಮಾನ್ಯವಾಗಿ ಕಂಡುಬರುವ ಅಂಶವಾಗಿದೆ. ಅದರಂತೆ, ವಿಶೇಷಚೇತನರೂ ಸಹ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿರುವುದು ವಿಷಾದನೀಯ ಸಂಗತಿ. ಜನಾಂಗ, ವರ್ಣ, ಲಿಂಗ ಮತ್ತು ಜಾತಿ ಇವುಗಳ ಆಧಾರದಲ್ಲಿ ಕಂಡುಬರುವ ತಾರತಮ್ಯಗಳು ಇಂದಿಗೂ ಜಗತ್ತಿನ ವಿವಿಧೆಡೆಗಳಲ್ಲಿ ಕಾಣುತ್ತಿರುವ ನಾವು ಇವುಗಳ ಜೊತೆಗೆ ವಿಶೇಷಚೇತನರಿಗೂ ಆಗುತ್ತಿರುವ ತಾರತಮ್ಯಗಳನ್ನು ಕಾಣಬಹುದು. ಆದರೆ, ನಾಗರೀಕ ಜಗತ್ತು ಪ್ರಗತಿಯ ಕಡೆಗೆ ಸಾಗಿದಂತೆಲ್ಲಾ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ವಿಶೇಷಚೇತನರಿಗೂ ಸಹ ಇತರರಂತೆ ಸಮಾನ ಜೀವನ ನಡೆಸಲು ಅಗತ್ಯ ಸೌಲಭ್ಯ ಒದಗಿಸಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳು ಈ ದಿಶೆಯಲ್ಲಿ ಇನ್ನೂ ಹಿಂದುಳಿದಿರುವುದನ್ನು ನೋಡಬಹುದು. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳು ಈಗಾಗಲೇ ಹಲವಾರು ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯು 1975 ರಲ್ಲಿಯೇ ವಿಶೇಷಚೇತನರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಿಕೊಡಲು ಅಗತ್ಯ ಅಂತರಾಷ್ಟ್ರೀಯ ಒಡಂಬಡಿಕೆಯನ್ನು ಜಾರಿಗೆ ತಂದಿದ್ದು, ವರ್ಷ ೧೯೯೨ ನ್ನು ಅಂತರಾಷ್ಟ್ರೀಯ ವಿಕಲಚೇತನರ ವರ್ಷವೆಂದು ಆಚರಿಸಲಾಯಿತು. ಅಂತೆಯೆ, ಏಷ್ಯಾದ ರಾಷ್ಟ್ರಗಳು ೧೯೯೩-೨೦೦೩ ರ ದಶಕವನ್ನು ಅಂಗವಿಕಲರ ದಶಕವೆಂದು ಆಚರಿಸಿದವು. ಇದರ ಅಂಗವಾಗಿ ಭಾರತವೂ ಸಹ ೧೯೯೬ ರಲ್ಲಿ ಅಂಗವಿಕಲರ ಅಧಿನಿಯಮವನ್ನು ಜಾರಿಗೆ ತಂದಿದ್ದರೂ ವಿಶೇಷಚೇತನರು ಸಮಾಜದ ಮುಖ್ಯವಾಹಿನಿಯಲ್ಲಿ ಸಮನ್ವಯಗೊಳ್ಳುವುದು ಇನ್ನೂ ಅಸಾಧ್ಯವಾಗಿದೆ. ಇದಕ್ಕೆ ಕಾರಣ ಅಧಿನಿಯಮದಲ್ಲಿ ಸೂಚಿಸಿರುವಂತೆ ತಡೆರಹಿತ ವಾತಾವರಣ ನಿರ್ಮಿಸಿ ವಿಶೇಷಚೇತನರ ಸರಾಗ ಸಂಚಲನಕ್ಕೆ ಅವಕಾಶ ಕಲ್ಪಿಸದಿರುವುದು. ಸರ್ಕಾರದ ಇಂತಹ ನಿರ್ಲಕ್ಷ್ಯವನ್ನು ಬಡಿದೆಚ್ಚರಿಸಲು ಸಂವಿಧಾನದ ರಕ್ಷಕನಾಗಿರುವ ಸರ್ವೋಚ್ಛ ನ್ಯಾಯಾಲಯಕ್ಕೆ ಸ್ವತಃ ದೃಷ್ಟಿ ವಿಶೇಷಚೇತನರಾಗಿರುವ ಶ್ರೀ ರಾಜೀವ್ ರಾತೂರಿ ಅವರು ೨೦೦೫ ರಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿ, ದೇಶದ ಸುಮಾರುಉ ೬೦ ರಿಂದ ೭೦ ದಶಲಕ್ಷ ವಿಶೇಷಚೇತನರಲ್ಲಿ ಶೇ. ೫೦ ರಷ್ಟಿರುವ ದೃಷ್ಟಿ ವಿಕಲಚೇತನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತಡೆರಹಿತ ವಾತಾವರಣ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದು, ಸದರಿ ಪ್ರಕರಣದ ತೀರ್ಪಿನಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು C.S. ಮಹಾಪಾತ್ರ ಅವರು ಸಂಪಾದಿಸಿ, ರಾಷ್ಟ್ರೀಯ ಮಾನಸಿಕ ಬುದ್ಧಿಮಾಂದ್ಯರ ಸಂಸ್ಥೆಯು ಪ್ರಕಟಿಸಿರುವ ’ಭಾರತದಲ್ಲಿಅಂಗವಿಕಲತೆಯ ನಿರ್ವಹಣೆ- ಸವಾಲುಗಳು ಮತ್ತು ಬದ್ಧತೆ’ ಎಂಬ ಪುಸ್ತಕದಲ್ಲಿ ಶ್ರೀಮತಿ ಸುನೀತಿ ಸಿಂಗ್ ಅವರು Accessibility Issues ಎಂಬ ಲೇಖನದಲ್ಲಿ ಸೂಚಿಸಿರುವಂತೆ ವಿಶೇಷಚೇತನರಿಗೆ ರಸ್ತೆ, ಸಾರ್ವಜನಿಕ ಕಟ್ಟಡಗಳು ಮತ್ತು ಇನ್ನಿತರೆ ಸ್ಥಳಗಳಲ್ಲಿ ವಿಶೇಷಚೇತನರಿಗೆ ತಡೆರಹಿತ ವಾತಾವರಣ ಕಲ್ಪಿಸಲು ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಲು ಸರ್ವೋಚ್ಛ ನ್ಯಾಯಾಲಯವು ಆದೇಶಿಸಿದೆ. ಅಲ್ಲದೇ, ಈ ಹಿಂದೆ ದಿನಾಂಕ ೧-೧-೧೯೯೬ ರಂದು ಜಾರಿಗೆ ಬಂದ ಅಂಗವಿಕಲರ ಅಧಿನಿಯಮದ ಅಧ್ಯಾಯ ೭ ರ ನಿಯಮ ೪೪ ರಿಂದ ೪೬ ರವರೆಗೆ ತಿಳಿಸಿರುವಂತೆ ತಡೆರಹಿತ ವಾತಾವರಣವನ್ನು ವಿಶೇಷಚೇತನರು ಮತ್ತು ಹಿರಿಯ ನಾಗರೀಕರಿಗೆ ನಿರ್ಮಿಸುವ ಸಲುವಾಗಿ ಕಟ್ಟಡಗಳು, ರಸ್ತೆಗಳು, ಸಾರ್ವಜನಿಕ ಸ್ಥಳಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾಡಬೇಕಾದ ಅಗತ್ಯ ಮಾರ್ಪಾಡುಗಳು ಮತ್ತು ನೂತನವಾಗಿ ನಿರ್ಮಿಸುವ ಸಾರ್ವಜನಿಕ ಕಟ್ಟಡಗಳು, ರಸ್ತೆಗಳು, ವಸತಿ ಸಮುಚ್ಛಯಗಳು ಮತ್ತು ಮನೆಗಳಲ್ಲಿ ಅನುಸರಿಸಬೇಕಾದ ಕಟ್ಟಡ ನಿರ್ಮಾಣ ಮಾರ್ಗಸೂಚಿಗಳನ್ನು ನಿಗದಿಪಡಿಸುವುದಕ್ಕಾಗಿ ತಜ್ಞರ ಸಮಿತಿಯೊಂದನ್ನು ನೇಮಿಸಿ ಅದು ನೀಡಿರುವ ಸಲಹೆಯಂತೆ ವಿಶೇಷಚೇತನರನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಿ (ಕಟ್ಟಡ ನಿರ್ಮಾಣದ ಮಾರ್ಗಸೂಚಿಗಳನ್ನು ನಿಗದಿಗೊಳಿಸುವ ಸಲುವಾಗಿ ) ಕಟ್ಟಡ ಸಂಹಿತೆಯನ್ನು ರೂಪಿಸಲಾಗಿದೆ. ಅವುಗಳೆಂದರೆ:-
೧. ಚಲನವಲನ ತೊಂದರೆಯುಳ್ಳವರು
೨. ಭಾಗಶಃ ಚಲನವಲನ ತೊಂದರೆಯುಳ್ಳವರು
೩. ದೃಷ್ಟಿದೋಷವುಳ್ಳವರು ಮತ್ತು
೪. ಶ್ರವಣದೋಷವುಳ್ಳವರು.
ಮೇಲೆ ಹೇಳಿರುವ ವಿಕಲಚೇತನರಿಗೆ ತಕ್ಕಂತೆ ಕಟ್ಟಡ ನಿರ್ಮಾಣ ಮಾರ್ಗಸೂಚಿಗಳನ್ನು ರೂಪಿಸುವ ಸಲುವಾಗಿ ಕಟ್ಟಡಗಳನ್ನು ಒಟ್ಟು ಎಂಟು ವಿಧಗಳಾಗಿ ವಿಂಗಡಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ.
೧. ವಸತಿ ಕಟ್ಟಡಗಳು.
೨. ವಾಣಿಜ್ಯ ಕಟ್ಟಡಗಳು.
೩. ಉತ್ಪಾದನಾ ಕಟ್ಟಡಗಳು.
೪. ಸಾರ್ವಜನಿಕ ಮತ್ತು ಅರೆಸಾರ್ವಜನಿಕ ಕಟ್ಟಡಗಳು.
೫. ಮನರಂಜನಾ ಕಟ್ಟಡಗಳು.
೬. ಸಾರಿಗೆ ಮತ್ತು ಸಂವಹನ ಕಟ್ಟಡಗಳು.
೭. ಕೃಷಿ ಮತ್ತು ಜಲಮೂಲಗಳು ಹಾಗೂ
೮. ವಿಶೇಷ ಸ್ಥಳಗಳು.

ಹೀಗೆ ಮೇಲೆ ವಿವರಿಸಿರುವ ಎಂಟು ಪ್ರಮುಖ ವಿಧದ ಕಟ್ಟಡಗಳಲ್ಲಿ ಒಳಗೊಳ್ಳುವ ಮನೆ, ವಸತಿ ಸಮುಚ್ಚಯಗಳು, ವಾಣಿಜ್ಯ ಸಂಕೀರ್ಣಗಳು, ವ್ಯಾಪಾರಿ ಮಳಿಗೆಗಳು, ಉದ್ಯಾನವನಗಳು, ಸಿನಿಮಾ ಮಂದಿರಗಳು, ದೇವಾಲಯಗಳು, ಸರ್ಕಾರಿ ಕಛೇರಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಬ್ಯಾಂಕುಗಳು, ಸಭಾಭವನಗಳು, ಆಸ್ಪತ್ರೆಗಳು, ರಸ್ತೆಗಳು, ಪಾದಾಚಾರಿ ರಸ್ತೆಗಳು ಹಾಗೂ ಇತರೆ ಎಲ್ಲಾ ಸ್ಥಳಗಳಲ್ಲಿ ನಾಲ್ಕೂ ವಿಧದ ವಿಕಲಚೇತನರಿಗೆ ಯಾವುದೇ ಅಡೆ-ತಡೆಯಿಲ್ಲದೇ ಸರಾಗವಾಗಿ ಸಂಚರಿಸಲು ಅಗತ್ಯವಾದ ವಾತಾವರಣವನ್ನು ನಿರ್ಮಿಸಲು ಸ್ಥೂಲವಾಗಿ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸುವುದು ಅತ್ಯವಶ್ಯಕವಾಗಿದೆ ಮತ್ತು ಇದರಿಂದ ವಿಕಲಚೇತನರಲ್ಲದೇ ಹಿರಿಯ ನಾಗರೀಕರೂ ಸಹಾ ಸುಲಭವಾಗಿ ಮತ್ತು ಸುರಕ್ಷಿತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಲು ಸಹಾಯವಾಗುತ್ತದೆ.

ಕಟ್ಟಡಗಳು:-
1. ದೈಹಿಕ ವಿಕಲಚೇತನರು ಗಾಲಿಕುರ್ಚಿಯಲ್ಲಿ ಸರಾಗವಾಗಿ ಸಂಚರಿಸುವಷ್ಟು ಅಗಲವಾದ ಮೊಗಸಾಲೆಗಳನ್ನು ಹೊಂದಿರಬೇಕು.
2. ಕೊಠಡಿಗಳ ಬಾಗಿಲುಗಳು ಗಾಲಿಕುರ್ಚಿಗಳು ಸಂಚರಿಸುವಷ್ಟು ಅಗಲವಾಗಿರಬೇಕು.
3. ಕಟ್ಟಡಗಳು ಸುರಕ್ಷಿತ ಪ್ರಮಾಣದ ಮಟ್ಟದಲ್ಲಿರುವ ಇಳಿಜಾಪುಗಳನ್ನು ಹೊಂದಿರಬೇಕು.
4. ಇಳಿಜಾಪುಗಳು ಅಗತ್ಯ ಮಟ್ಟದ ಎತ್ತರದಲ್ಲಿ ಕೈಪಿಡಿಗಳನ್ನು ಹೊಂದಿರಬೇಕು.
5. ಶೌಚಾಲಯಗಳು ಸ್ಟೂಲ್ ಮಾದರಿ (Western style) ಕಮೋಡ್ ಗಳನ್ನು ಹೊಂದಿರಬೇಕು.
6. ವಿದ್ಯುತ್ ಗುಂಡಿಗಳನ್ನು ಗಾಲಿಕುರ್ಚಿಯಲ್ಲಿನ ವ್ಯಕ್ತಿಯ ಕೈಗೆ ನಿಲುಕುವಷ್ಟು ಎತ್ತರದಲ್ಲಿ ಅಳವಡಿಸಿರಬೇಕು.
7. ಬಹುಮಹಡಿಗಳ ಕಟ್ಟಡಗಳು ಎತ್ತುಗ (Lifts) ಗಳನ್ನು ಹೊಂದಿರಬೇಕು.
8. ವಾಹನ ನಿಲುಗಡೆ ಸ್ಥಳಗಳಲ್ಲಿ ಮೊದಲ ೨ ಅಥವಾ ೩ ಸ್ಥಳಗಳನ್ನು ವಿಕಲಚೇತನರಿಗೆ ಮೀಸಲಿಡಬೇಕು.
9. ನೆಲಕ್ಕೆ ಹಾಕುವ ಹಾಸುಗಲ್ಲುಗಳು ಜಾರದಂತೆ ಇರಬೇಕು.
10. ಸಭಾಂಗಣಗಳು ಮತ್ತು ಕೊಠಡಿಗಳ ಮುಂದಿನ ಮೊಗಸಾಲೆಗಳು ಗಾಲಿಕುರ್ಚಿಗಳನ್ನು ನಿರ್ವಹಿಸಲು ಅಗತ್ಯವಿರುವಷ್ಟು ಅಗಲವಿರಬೇಕು.
11. ಎತ್ತುಗಗಳ ಬಾಗಿಲುಗಳು ನಿಧಾನವಾಗಿ ಮುಚ್ಚುವ ವ್ಯವಸ್ಥೆಯನ್ನು ಹೊಂದಿರಬೇಕು.
12. ಕೈ ತೊಳೆಯುವ ಬೇಸಿನ್ ಗಳು ಮತ್ತು ನಲ್ಲಿಗಳು ಗಾಲಿಕುರ್ಚಿಯಲ್ಲಿನ ವ್ಯಕ್ತಿಗೆ ನಿಲುಕುವಷ್ಟು ಎತ್ತರದಲ್ಲಿರಬೇಕು.
13. ಬಾಗಿಲುಗಳ ಚಿಲಕಗಳು ಗಾಲಿಕುರ್ಚಿಯಲ್ಲಿನ ವ್ಯಕ್ತಿಗೆ ನಿಲುಕುವಷ್ಟು ಎತ್ತರದಲ್ಲಿರಬೇಕು.
14. ಪಾದಾಚಾರಿಗಳು ಬಳಸುವ ರಸ್ತೆಗಳು ಮ್ಯಾನ್ ಹೋಲ್ ಗಳಿಂದ ಮುಕ್ತವಾಗಿರಬೇಕು.
15. ಪಾದಾಚಾರಿ ರಸ್ತೆಗಳಿಂದ ವಾಹನಗಳಿಗೆ ಹತ್ತುವ ಸ್ಥಳಗಳಲ್ಲಿ ದೈಹಿಕ ವಿಕಲಚೇತನರು ಇಳಿಯಲು ಮತ್ತು ಹತ್ತಲು ಅಗತ್ಯ ಮಾರ್ಪಾಡುಗಳನ್ನು ಮಾಡಬೇಕು.
16. ಪಾದ?ಚಾರಿ ರಸ್ತೆಗಳಲ್ಲಿ ಅಳವಡಿಸುವ ಜಾಹಿರಾತು ಫಲಕಗಳು ಅಂಧವ್ಯಕ್ತಿಗಳ ದೇಹದ ಭಾಗಗಳಿಗೆ ತಗುಲದಷ್ಟು ಎತ್ತರದಲ್ಲಿರಬೇಕು ಮತ್ತು ಅವುಗಳ ಕಂಭಗಳು ಪಾದಾಚಾರಿ ರಸ್ತೆಯ ಮಧ್ಯದಲ್ಲಿ ಇರಬಾರದು.
17. ದೃಷ್ಟಿ ವಿಕಲಚೇತನರಿಗೆ ರಸ್ತೆಯ ಅಂಚುಗಳು ಮತ್ತು ಪಾದಾಚಾರಿ ರಸ್ತೆಗಳ ನಡುವಣ ವ್ಯತ್ಯಾಸ ತಿಳಿಯುವಂತೆ ಎತ್ತರಗಳಲ್ಲಿ ವ್ಯತ್ಯಾಸವಿರಬೇಕು ಮತ್ತು ನೆಲಹಾಸಿನ ಕಲ್ಲುಗಳು ಅವರು ಉಪಯೋಗಿಸುವ ಬಿಳಿಕೋಲಿನ ಸ್ಪರ್ಷದಿಂದ ವ್ಯತ್ಯಾಸವನ್ನು ಗುರ್ತಿಸುವಂತಿರಬೇಕು.
18. ಎಲ್ಲಾ ಸಾರ್ವಜನಿಕ ಕಟ್ಟಡಗಳಲ್ಲಿ ಅಗತ್ಯವಿರುವೆಡೆಯಲ್ಲಿ ಬ್ರೈಲ್ ಲಿಪಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿರಬೇಕು.
19. ಅಲ್ಪದೃಷ್ಟಿ ದೋಷವುಳ್ಳವರಿಗೆ ಮೆಟ್ಟಿಲುಗಳು ಮತ್ತು ಸಮನೆಲದ ನಡುವಣ ವ್ಯತ್ಯಾಸ ತಿಳಿಯುವ ಸಲುವಾಗಿ ಬಣ್ಣಗಳನ್ನು ಲೇಪಿಸಿರಬೇಕು.
20. ನಾಮಫಲಕಗಳ ಅಕ್ಷರಗಳ ಗಾತ್ರವು ಕಟ್ಟಡ ನಿರ್ಮಾಣ ಮಾರ್ಗಸೂಚಿಯಲ್ಲಿ ತಿಳಿಸಿರುವ ಪ್ರಮಾಣದಲ್ಲಿರಬೇಕು.
21. ವಾಹನಗಳಲ್ಲಿ ನಿಲುಗಡೆಗಳನ್ನು ಸೂಚಿಸಲು ಧ್ವನಿಸೂಚಕಗಳನ್ನು ಅಳವಡಿಸಿರಬೇಕು.
22. ಶ್ರವಣ ನ್ಯೂನತೆಯುಳ್ಳವರಿಗೆ ಅನುಕೂಲವಾಗುವಂತೆ ಅಗತ್ಯವಾದ ನಾಮಫಲಕಗಳನ್ನು ಪ್ರತಿಯೊಂದು ಸಾರ್ವಜನಿಕ ಕಟ್ಟಡಗಳು ಮತ್ತು ಸ್ಥಳಗಳಲ್ಲಿ ಅಳವಡಿಸಬೇಕು.
23. ರಸ್ತೆಗಳನ್ನು ದಾಟಲು ಅಗತ್ಯವಾದ ಮೇಲುಸೇತುವೆ ಮತ್ತು ಎತ್ತುಗಗಳನ್ನು ಅಳವಡಿಸಬೇಕು.
24. ಎತ್ತುಗಗಳಲ್ಲಿ ಬ್ರೈಲ್ ಲಿಪಿಯುಳ್ಳ ಗುಂಡಿಗಳು ಇರಬೇಕು ಮತ್ತು ಮಹಡಿಗಳನ್ನು ಸೂಚಿಸುವ ಧ್ವನಿಸೂಚಕಗಳನ್ನು ಅಳವಡಿಸಬೇಕು.
25. ವಾಸದ ಮನೆಗಳಲ್ಲಿ ಗಾಲಿಕುರ್ಚಿಗಳನ್ನು ಬಳಸುವವರಿಗೆ ಅನುಕೂಲವಾಗುವಂತೆ ವಿಶಾಲವಾದ ಬಾಗಿಲುಗಳು, ವೆಸ್ಟರ್ನ್ ಶೌಚಾಲಯಗಳು, ನಿಲುಕುವ ಎತ್ತರದಲ್ಲಿ ವಿದ್ಯುತ್ ಗುಂಡಿಗಳು, ಬಾಗಿಲುಗಳ ಚಿಲಕಗಳು, ನಲ್ಲಿಗಳು, ಅಡಿಗೆ ಮನೆಯ ಶೆಲ್ಪ್ ಗಳು ಹೀಗೆ ಎಲ್ಲವನ್ನೂ ಮಾರ್ಪಾಡು ಮಾಡಬೇಕು.