ಸಂಘದ ಸಂವಿಧಾನ

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ
ರಚನೆ ಮತ್ತು ಆಡಳಿತ ನಿಯಮಗಳು 2017

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ
#41/ಬಿ. ಬಿ ಬ್ಲಾಕ್ ರೈನ್ಬೊ ಲೇಔಟ್, ವಡೇರಹಳ್ಳಿ
ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು ಉತ್ತರ-560097

ಮುನ್ನುಡಿ

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ನಾಗರಿಕ ಸೇವೆಗಳು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಂಗವಿಕಲ ಸಮುದಾಯದಲ್ಲಿ ವಿಶೇಷವಾಗಿ ಅಂಧ ಸಮುದಾಯ ಉದ್ಯೋಗ ಅವಕಾಶಗಳಿಲ್ಲದೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿರಲಿಲ್ಲ.

1995 ಅಂಗವಿಕಲ ಹಕ್ಕುಗಳು ಸಮಾನ ಅವಕಾಶಗಳು ಹಾಗೂ ಪೂರ್ಣ ಭಾಗವಹಿಸುವಿಕೆ ಅಧಿನಿಯಮ (PWD) ಅನುಷ್ಠಾನಕ್ಕೆ ಬಂದಾಗ್ಯೂ, ಕಾಯ್ದೆ ಬದ್ಧವಾಗಿ ದೊರೆಯಬೇಕಾಗಿದ್ದ ಸವಲತ್ತುಗಳು ಮರೀಚಿಕೆಯಾದವೆನೋ ಅನಿಸಿತ್ತು. ಈ ತೊಡಕನ್ನು ಅರಿತ ರಾಷ್ಟ್ರೀಯ ಅಂಧರ ಒಕ್ಕೂಟ ಕರ್ನಾಟಕ ರಾಜ್ಯ ಶಾಖೆ ಹಾಗೂ ಅಂಗವಿಕಲರ ಅಧಿನಿಯಮ ನ್ಯಾಯಾಲಯದ ರಾಜ್ಯ ಆಯುಕ್ತರಾಗಿದ್ದ ಶ್ರೀಯುತ ಕೆ.ವಿ.ರಾಜಣ್ಣ ರವರು ಕಾಯ್ದೆಯನ್ನು ಅನುಷ್ಠಾನಗೊಳಿಸಲು ತೋರಿದ ಪ್ರಾಮಾಣಿಕ ಪ್ರಯತ್ನದ ಫಲವಾಗಿ, ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಆದೇಶದನುಸಾರ 2010ರ ನಂತರ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ಅಂಧರು ಗಳಿಸಿಕೊಂಡ ಕ್ಷಣವು ಎಲ್ಲಾ ಅಂಧ ಸಮುದಾಯದಲ್ಲಿ ಸ್ಮರಣೀಯವಾಗಿ ಉಳಿದಿದೆ.

ಈ ಮೇಲಿನ ಹಿನ್ನೆಲೆಯಲ್ಲಿ ಮುಂದುವರೆದು ತಿಳಿಯಪಡಿಸುವುದೇನೆಂದರೆ, ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಅಂಧ ನೌಕರರ ಸಾಮರ್ಥ್ಯ, ಕರ್ತವ್ಯಗಳ ಹಂಚಿಕೆ ಹಾಗೂ ಹಂಚಿಕೆಯಾದ ಕರ್ತವ್ಯಗಳಿಗೆ ಪೂರಕವಾದ ಪರಿಕರಗಳನ್ನು ಒದಗಿಸುವುದು ಹಾಗೂ ವಾತಾವರಣವನ್ನು ಸೃಷ್ಟಿಸಬೇಕಾದ ಅವಶ್ಯಕತೆ ಇರುವುದರಿಂದ ಹಾಗೂ ಹೋರಾಟದ ಫಲವಾಗಿ ಗಳಿಸಿದ ಉದ್ಯೋಗ ಭದ್ರತೆಯನ್ನು ಕಾಯ್ದುಕೊಳ್ಳುವುದು ಹಾಗೂ ಅಂಧ ಉದ್ಯೋಗಿಗಳ ಘನತೆ ಮತ್ತು ಗೌರವಗಳನ್ನು ಸಂರಕ್ಷಿಸಿಕೊಳ್ಳಲು ಅಂಧ ಸರ್ಕಾರಿ ನೌಕರರ ಸಂಘಟನೆಯ ಅನಿವಾರ್ಯತೆಯನ್ನು ಮನಗಂಡು ಸಂಘಟಿತ ಚೌಕಟ್ಟಿನಲ್ಲಿ ಅಧಿಕೃತ ಆಯಾಮಕ್ಕಾಗಿ ಅಭಿಪ್ರಾಯವನ್ನು ಸಂಗ್ರಹಿಸಿ ದಿನಾಂಕ 12-02-2017 ರಂದು ಮೈಸೂರಿನ ಜೆ.ಎಲ್.ಬಿ. ರಸ್ತೆಯ ರೋಟರಿ ಶಾಲಾ ಸಭಾಂಗಣದಲ್ಲಿ ಸಂಘಟಿತ ಚೌಕಟ್ಟಿಗೆ ಬುನಾದಿ ಹಾಕಲು ತೀರ್ಮಾನಿಸಲಾಯಿತು. ಈ ಸುದಿನದಂದು ರಾಜ್ಯದೆಲ್ಲೆಡೆಯಿಂದ ಆಗಮಿಸಿದ ಹೆಚ್ಚಿನ ಸಂಖ್ಯೆಯ ರಾಜ್ಯ ಸರ್ಕಾರಿ ಅಂಧ ನೌಕರರು ಸಂಘಟಿತಗೊಳ್ಳಲು ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯನ್ನು ರಚಿಸಲು ಒಮ್ಮತದ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ತಾತ್ಕಾಲಿಕ ಸಮಿತಿಯ ಪದಾಧಿಕಾರಿಗಳು

ಉದ್ದೇಶಿತ ಈ ಸಂಘಟನೆಯ ರಚನಾ ಪ್ರಕ್ರಿಯೆಗೆ ಪೂರಕವಾಗಿ ತಾತ್ಕಾಲಿಕ ಸಮಿತಿಯನ್ನು ಶ್ರೀ ಎ ಸುರೇಶ್ ರವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ 12 ಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಲಾಗಿದ್ದು, ರಾಜ್ಯ ಸರ್ಕಾರಿ ಅಂಧ ನೌಕರರ ಸರ್ವತೋಮುಖ ಹಿತಾಸಕ್ತಿಯನ್ನು ಸಂರಕ್ಷಿಸುವುದು ಇದರ ಕಾರ್ಯವಾಗಿರುತ್ತದೆ. ಅಂತೆಯೇ, ಈ ಸದಸ್ಯರುಗಳನ್ನು ಸಂಸ್ಥಾಪಕ ಸದಸ್ಯರೆಂದು ಪರಿಗಣಿಸಲಾಗಿರುತ್ತದೆ.

ಕ್ರ.ಸಂ. ಹೆಸರು ಪದನಾಮ
1 ಶ್ರೀ ಸುರೇಶ್ ಎ ಅಧ್ಯಕ್ಷರು
2 ಶ್ರೀ ರಮೇಶ್ ಸಂಕರರೆಡ್ಡಿ ಉಪಾಧ್ಯಕ್ಷರು
3 ಶ್ರೀಮತಿ ನೇತ್ರಾವತಿ ಎನ್ ಉಪಾಧ್ಯಕ್ಷರು
4 ಶ್ರೀ ಸಿದ್ದರಾಜು ಎನ್ ಪ್ರಧಾನ ಕಾರ್ಯದರ್ಶಿ
5 ಶ್ರೀ ಕುಪೇಂದ್ರ ಕಾರ್ಯದರ್ಶಿ
6 ಶ್ರೀ ಪ್ರಶಾಂತ ಎಮ್ ಎನ್ ಸಂಘಟನಾ ಕಾರ್ಯದರ್ಶಿ
7 ಶ್ರೀ ಯಶವಂತ ಕುಮಾರ್ ಹೆಚ್ ವಿ ಖಜಾಂಚಿ
8 ಶ್ರೀ ಲೋಕೇಶ ವಿಭಾಗೀಯ ನಿರ್ದೇಶಕರು (ಮೈ.ವಿ.)
9 ಶ್ರೀ ವೀರಕ್ಯಾತಯ್ಯ ಎನ್ ವಿಭಾಗೀಯ ನಿರ್ದೇಶಕರು (ಬೆಂ.ವಿ.)
10 ಶ್ರೀ ನಾಗರಾಜು ಪಿ.ವಿ. ವಿಭಾಗೀಯ ನಿರ್ದೇಶಕರು (ಕಲ್ಬುರ್ಗಿ ವಿ.)
11 ಶ್ರೀ ಶಿವಾಜಿ ವಿ. ಮಾನೆ ವಿಭಾಗೀಯ ನಿರ್ದೇಶಕರು (ಬೆಳಗಾವಿ ವಿ.)
12 ಶ್ರೀಮತಿ ಶಾರದ ಎನ್ ಮಹಿಳಾ ನಿರ್ದೇಶಕರು

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ (ರಚನೆ ಮತ್ತು ಆಡಳಿತ) ನಿಯಮಗಳು-2

ಅಧಿಕಾರ ವ್ಯಾಪ್ತಿ

a) ಸಂಘದ ಅಧಿಕಾರ ವ್ಯಾಪ್ತಿಯು ಸಮಗ್ರ ಕರ್ನಾಟಕ ರಾಜ್ಯಕ್ಕೆ ಅನ್ವಯಸತಕ್ಕದ್ದು.

b) ಪ್ರಾರಂಭ: ಈ ನಿಯಮವು ಸಂಘವು ನೋಂದಾವಣೆಯಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

ಪರಿಭಾಷೆಗಳು ಮತ್ತು ಪದಾವಳಿಗಳು

ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕೆ ವಿರುದ್ದವಾದುದು ಏನೇ ಇದ್ದ ಹೊರತು:-

a) ಸಂಘ ಎಂದರೆ ಕನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ.

b) ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಖಜಾಂಚಿ, ವಿಭಾಗೀಯ ನಿರ್ದೇಶಕರು, ಮಹಿಳಾ ನಿರ್ದೇಶಕರು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು, ಆಂತರಿಕ ಲೆಕ್ಕಪರಿಶೋದಕರು ಮತ್ತು ಗೌರವ ಸಲಹೆಗಾರರು ಎಂದರೆ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಖಜಾಂಚಿ, ವಿಭಾಗೀಯ ನಿರ್ದೇಶಕರು, ಮಹಿಳಾ ನಿರ್ದೇಶಕರು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು, ಆಂತರಿಕ ಲೆಕ್ಕಪರಿಶೋಧಕರು ಮತ್ತು ಗೌರವ ಸಲಹೆಗಾರರು.

c) ಕೆಂದ್ರ ಸಂಘ ಅಥವಾ ರಾಜ್ಯ ಸಂಘ ಎಂದರೆ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ.

d) ವಿಭಾಗೀಯ ಶಾಖೆ ಎಂದರೆ ಕಂದಾಯ ವಿಭಾಗಗಳ ಕೇಂದ್ರ ಸ್ಥಾನದಲ್ಲಿರುವ ರಾಜ್ಯ ಸಂಘದ ಶಾಖೆ.

e) ಸಂಘದ ವರ್ಷ ಎಂದರೆ ಕ್ಯಾಲೆಂಡರ್ ವರ್ಷ.

‌f) ಕಛೇರಿ ಎಂದರೆ ಕೇಂದ್ರ ಅಥವಾ ರಾಜ್ಯ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಖಜಾಂಚಿ ಮತ್ತು ಆಂತರಿಕ ಲೆಕ್ಕ ಪರಿಶೋಧಕರು ಸೇರಿದಂತೆ ವಿಭಾಗೀಯ ನಿರ್ದೇಶಕರಗಳು, ಮಹಿಳಾ ನಿರ್ದೇಶಕರುಗಳಿಗೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಮತ್ತು ಗೌರವ ಸಲಹೆಗಾರರು ಇವರು ಕಾರ್ಯನಿರ್ವಹಿಸುವ ಕಛೇರಿ.

g) ಕೇಂದ್ರ ಕಾರ್ಯಕಾರಿ ಸಮಿತಿ ಎಂದರೆ ಕೇಂದ್ರದ ಅಥವಾ ರಾಜ್ಯ ಸಂಘದ ಕಾರ್ಯಕಾರಿ ಸಮಿತಿ.

h) ಲೆಕ್ಕ ಪರಿಶೋಧಕರು ಎಂದರೆ ಆಡಳಿತ ಸಮಿತಿಯು ನೇಮಿಸಿಕೊಳ್ಳಬಹುದಾದ ಲೆಕ್ಕ ಪರಿಶೋಧಕರು.

i) ಉಪಸಮಿತಿಗಳು ಎಂದರೆ ಕಾರ್ಯಕಾರಿ ಸಮಿತಿಯು ಸಂಘಟನೆಯ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ ಅಗತ್ಯಾನುಸಾರ ರಚಿಸಬಹುದಾದ 5 ಜನರ ಸಮಿತಿಯಾಗಿರುತ್ತದೆ.

j) ಕಾನೂನು ಸಲಹೆಗಾರರು ಎಂದರೆ ಕಾರ್ಯಕಾರಿ ಸಮಿತಿಯು ಅಗತ್ಯಾನುಸಾರ ನೇಮಿಸಿಕೊಳ್ಳಬಹುದಾದ ಬಾರ್ ಕೌನ್ಸಿಲ್‍ನಲ್ಲಿ ಮಾನ್ಯತೆ ಪಡೆದ ವಕೀಲರು ಎಂದಾಗಿರುತ್ತಾರೆ.

k) ಗೌರವ ಸಲಹೆಗಾರರು ಎಂದರೆ ಕಾರ್ಯಕಾರಿ ಸಮಿತಿಯು ಆಗತ್ಯಾನುಸಾರ ನೇಮಿಸಿಕೊಳ್ಳಬಹುದಾದ ಅಂಧ ಸಮುದಾಯದ ಬಗ್ಗೆ ಪರಿಣಿತಿ ಹೊಂದಿರುವ ವ್ಯಕ್ತಿಯಾಗಿರತ್ಕದ್ದು.

l) ನಿಯಮಿಸಲಾದ ಪ್ರಾಧಿಕಾರ ಎಂದರೆ ಕರ್ನಾಟಕ ಸಂಘಗಳ ನೊಂದಾಯಿತ 1960 ರ ಅಡಿಯಲ್ಲಿ ನಿಯಮಿಸಲಾದ ಪ್ರಾಧಿಕಾರಿಗಳು.

m) ಪದಾಧಿಕಾರಿಗಳು ಎಂದರೆ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಖಜಾಂಚಿ, ವಿಭಾಗಿಯ ನಿರ್ದೇಶಕರುಗಳು, ಮಹಿಳೆಯರಿಗಾಗಿನ ವಿಶೇಷ ಪ್ರತಿನಿಧಿಯ ನಿರ್ದೇಶಕರು ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು.

n) ಸಂಯೋಜಿತ ಸಂಘ ಎಂದರೆ ಸಂಘಟನೆಯ ಸಮಾನ ಧ್ಯೇಯೋದ್ದೇಶ ಆಸಕ್ತಿ ಹೊಂದಿರಬಹುದಾದ ಸಂಘ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಬಹುದಾದ ಸಂಯೋಜನೆಯಾಗಿರುತ್ತದೆ.

o) ರಾಜ್ಯ ಪರಿಷತ್ ಎಂದರೆ ಚುನಾಯಿತ ಕೇಂದ್ರ ಅಥವಾ ರಾಜ್ಯ ಸಂಘದ ಕಾರ್ಯಕಾರಿ ಸಮಿತಿಯ ಪಧಾಧಿಕಾರಿಗಳು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಮತ್ತು ಸ್ಥಾಪಕ ಅಥವಾ Ad hoc Committee ಯ ಖಾಯಂ ಸದ್ಯಸರುಗಳು ಈ ರಾಜ್ಯ ಪರಿಷತ್ತಿನ ವ್ಯಾಪ್ತಿಗೆ ಬರತಕ್ಕದ್ದು.

p) ಮಹಾಸಭೆ ಎಂದರೆ ಸರ್ವ ಸದಸ್ಯರನ್ನು ಒಳಗೊಂಡು ನಡೆಯುವ ವಾರ್ಷಿಕ ಸಭೆ.

q) ಅಂಧರು ಎಂದರೆ ಅಂಗವಿಕಲ ವ್ಯಕ್ತಿಗಳು ಹಕ್ಕುಗಳ ಅಧಿನಿಯಮ 2016 ರ ಅಡಿಯಂತೆ ಹಾಗೂ ಇದಕ್ಕೆ ಅನುಗುಣವಾಗಿ ರೂಪಿಸಬಹುದಾದ. ನಿಯಮಗಳು ಹಾಗೂ ಕಾಲಕಾಲಕ್ಕೆ ಜಾರಿಗೊಳಿಸಬಹುದಾದ ಸಂಬಂಧಿತ ನಿಯಮಗಳಲ್ಲಿ ವ್ಯಾಖ್ಯಾನಿಸುವಂತೆ (Bench Mark Disability) ಅರ್ಥಕ್ಕೆ ಅನುಗುಣವಾಗಿರುವುದು.

ಪ್ರಧಾನ ಕಛೇರಿ

ಕೇಂದ್ರ ಅಥವಾ ರಾಜ್ಯ ಸಂಘದ ಪ್ರಧಾನ ಕಛೇರಿಯು ಬೆಂಗಳೂರು ನಗರದಲ್ಲಿ ಇರತಕ್ಕದ್ದು.

ಧ್ಯೇಯೋದ್ದೇಶಗಳು

ಸಂಘದ ಧ್ಯೇಯೋದ್ದೇಶಗಳು  ಈ ಮುಂದಿನದಂತೆ ಇರತಕ್ಕದ್ದು.

a) ಅಂಧ/ ದೃಷ್ಟಿಮಾಂದ್ಯ, ನೌಕರರ ಹಿತಾಸಕ್ತಿ ಹಾಗೂ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುವುದು

b) ಅಂಧ ನೌಕರರ ಸ್ವಾವಲಂಬನೆಯ ಸಾಧನೆಗಾಗಿ ಅಗತ್ಯವಿರುವ ರೂಪುರೇಷೆಗಳನ್ನು ರೂಪಿಸುವುದು ಹಾಗೂ ಅವುಗಳ ಅನುಷ್ಠಾನಕ್ಕಾಗಿ ಸಂಬಂಧಿಸಿದ ಪ್ರಾಧಿಕಾರ/ ಇಲಾಖೆ/ ಸರ್ಕಾರದ ಗಮನ ಸೆಳೆಯುವುದು.

c) ಅಂಧ/ ದೃಷ್ಟಿಮಾಂದ್ಯ ನೌಕರರ ಕರ್ತವ್ಯ ನಿರ್ವಾಹಣೆಗಾಗಿ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಯತ್ನಿಸುವುದು.

d) ಅಂಧ ನೌಕರರ ಕರ್ತವ್ಯ ನಿರ್ವಹಣೆ ಸಂಬಂಧಿಸಿದಂತೆ ಆಡಳಿತಾತ್ಮಕ/ ತಾಂತ್ರಿಕ/ ಭೌತಿಕ ಹಾಗೂ ಇನ್ಯಾವುದೇ ಬಗೆಯ ಅಡೆತಡೆಗಳನ್ನು ನಿವಾರಿಕೊಳ್ಳಲು ಯತ್ನಿಸುವುದು.

e) ಅಂಧ/ ದೃಷ್ಟಿಮಾಂದ್ಯ ನೌಕರರು ಕರ್ತವ್ಯ ನಿರ್ವಹಣೆಯ ಸ್ಥಳದಲ್ಲಿ ಹಾಗೂ ಸಮಾಜದಲ್ಲಿ ಘನತೆ ಗೌರವ ಹಾಗೂ ಸಮಾನತೆಗಳನ್ನು ಸಂರಕ್ಷಿಸುವುದು.

f) 2016ರ ಆಂಗವಿಕಲರ ಹಕ್ಕುಗಳು ಅಧಿನಿಯಮ/ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ/ ಉಚ್ಚ ನ್ಯಾಯಾಲಗಳು/ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸಬಹುದಾದ ಸಮುದಾಯದ ಹಿತಾಸಕ್ತಿಗೆ ಪೂರಕವಾದ ಆದೇಶಗಳನ್ನು ಅನುಷ್ಟಾನಕ್ಕೆ ಬರುವಂತೆ ಪ್ರಯತ್ನಿಸುವುದು.

g) ಅಂಧ ನೌಕರರ ಕರ್ತವ್ಯ ನಿರ್ವಾಹಣೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆ ಮಾರ್ಗದರ್ಶಗಳನ್ನು ಪಡೆಯಲು ಅನುವಾಗುವಂತೆ ಪೂರಕ ವ್ಯವಸ್ಥೆಯನ್ನು ರಚಿಸುವುದು.

h) ವಿಶೇಷವಾಗಿ ಅಂಧಮಹಿಳಾ ನೌಕರರಿಗೆ ಸಂಬಂಧಿಸಿದಂತೆ ಅಂಗವಿಕಲರ ಹಕ್ಕು ಅಧಿನಿಯಮ 2016ರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿದ ಅಧಿನಿಯಮ ಹಾಗೂ ಆದೇಶಗಳಿಗನುಸಾರ ಇವರ ಹಿತಾಸಕ್ತಿ ರಕ್ಷಣೆಗೆ ಯತ್ನಿಸುವುದು.

i) ಅಂಧ ನೌಕರರ ಅಂಧತ್ವದ ಬಗ್ಗೆ ಸಹದ್ಯೋಗಿಗಳು/ ಸಂಬಂಧಿಸಿದ ಇಲಾಖೆಗಳ/ ಸರ್ಕಾರದ ಹಂತದಲ್ಲಿ ಅರಿವು ಮೂಡಿಸಿ ಆ ಮೂಲಕ ಅಂಧನೌಕರಲ್ಲಿರುವ ವಿಶೇಷ ಸಾಮರ್ಥ್ಯವನ್ನು ಬೆಳಸಿಕೊಳ್ಳಲು ಜಾಗೃತಿ ಮೂಡಿಸುವುದು.

j) ಅಂಧ ನೌಕರರ ಕಾರ್ಯ ನಿರ್ವಹಣೆಗೆ ಸಂಬಂದಿಸಿದಂತೆ ಇಲಾಖೆ/ ಸರ್ಕಾರ ನೀಡಬಹುದಾದ ವಿವಿದ ಸ್ವರೂಪದ ತರಬೇತಿಗಳು ವಿಶೇಷವಾಗಿ ತರಬೇತಿಯ ಸಾಮಗ್ರಿಗಳು ಹಾಗೂ ವಿಧಾನಗಳನ್ನು ಅಂಧ ಸ್ನೆಹಿಯಾಗಿರುವಂತೆ ನೋಡಿಕೊಳ್ಳುವುದು. ಹಾಗೂ ಇದರ ಜೊತೆ ಕೆಲವೊಮ್ಮೆ ಅಂಧ ನೌಕರರಿಗಾಗಿ ಕೆಲವೊಂದು ವಿಶೇಷ ತರಬೇತಿಗಳನ್ನು ರೂಪಿಸಲು ಪ್ರಯತ್ನಿಸುವುದು.

k) ಸಂಘದ ಸದಸ್ಯರ ಕಾರ್ಯನಿರ್ವಹಣೆಯ ದೃಷ್ಠಿಯಿಂದ ಅವಶ್ಯವಿರುವ ಹಾಗೂ ಸದಸ್ಯರ ಉತ್ಪಾದಕ ಸಾಮರ್ಥ್ಯವನ್ನು ವೃದ್ದಿಗೊಳಿಸಲು ಅಗತ್ಯವಿರುವ ಕಾರ್ಯಗಳನ್ನು ಉಪನ್ಯಾಸಗಳನ್ನು ಆಫ್ ಲೈನ್ ಹಾಗೂ ಆನ್‍ಲೈನ್ಗಳ ಮುಖಾಂತರ ಸಂಘವು ಆಯೋಜಿಸುವುದು. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಮಾದ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು. ಅಲ್ಲದೆ ಈ ಕಾರ್ಯಗಳಲ್ಲಿ ಸರ್ಕಾರದ/ ಇಲಾಖೆಗಳ ಹಾಗೂ ಇತರ ಪರಿಣಿತ ಸಂಘ ಸಂಸ್ಥೆಗಳ ಸಹಯೋಗ ಪಡೆಯಲು ಯತ್ನಿಸುವುದು.

l) ಕೆಲಸಕ್ಕೆ ಸೇರಿದ ಅಂಧ ನೌಕರರಿಗೆ ಅವರ ಸಾಮರ್ಥ್ಯಕ್ಕನುಗುಣವಾಗಿ ನಿರ್ವಹಿಸಬಹುದಾದ ಕಾರ್ಯಗಳನ್ನು ಗುರುತಿಸುವಲ್ಲಿ ಅಥವಾ ಅಂತಹ ಕಾರ್ಯನಿರ್ವಾಹಣೆಗೆ ಅಗತ್ಯವಿರುವ ಪೂರಕ ಪರಿಕರ ತಂತ್ರಾಂಶಗಳನ್ನು (Assistive Technology) ಒದಗಿಸುವಲ್ಲಿ ಇಲಾಖೆ ಅಥವಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು.

m) ಸರ್ಕಾರದ ವಿವಿದ ಇಲಾಖೆಗಳ ಅಂತರಜಾಲ ತಾಣಗಳು ಹಾಗೂ ತಂತ್ರಾಂಶಗಳು ಅಂಧ ನೌಕರರಿಗೆ Accessible ಇರುವಂತೆ ವಿನ್ಯಾಸಗೊಳಿಸುವುದರ ಬಗೆಗಿನ ಸಂಬಂದಪಟ್ಟ ಇಲಾಖೆಗಳ ಮನವರಿಕೆ ಮಾಡಿಕೊಳ್ಳುವುದು ಹಾಗೂ ಸಲಹೆಗಳನ್ನು ನೀಡುವುದು

n) ಸದರಿ ಸಂಘಟನೆಯು ಸರ್ಕಾರಿ ಅಂಧ ನೌಕರರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಜೊತೆ ಜೊತೆಗೆ ಅನುದಾನಿತ ಅಂಗಸಂಸ್ಥೆಗಳು ಹಾಗೂ ಇನ್ನಿತರ ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಧನೌಕರರ ಹಿತಾಸಕ್ತಿಯನ್ನು ಸಹ ಸಮುದಾಯದ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಸಂರಕ್ಷಿಕೊಳ್ಳಲು ಯತ್ನಿಸುವುದು.

o) ಅಂಧ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ, ಸೇವಾ ವೇತನ, ನಿವೃತ್ತಿ ವೇತನ ಭತ್ಯೆ, ಭವಿಷ್ಯ ನಿಧಿ, ಸೇರಿದಂತೆ ವಿಶೇಷ ಭತ್ಯೆ ಮುಂತಾದ ಸುಧಾರಣೆಯನ್ನು ಎತ್ತಿ ಹಿಡಿಯುವುದು ಮತ್ತು ಸುಧಾರಿಸುವುದಕ್ಕೆ ಸಲಹೆಗಳನ್ನು ನೀಡುವುದು.

p) ಮೇಲ್ಕಾಣಿಸಿದಂತೆ ಸದಸ್ಯರ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಅಗತ್ಯವಾದ ಸಹಕಾರಿ ಸಂಘ, ಗೃಹ ನಿರ್ಮಾಣ ಸಂಘ, ಕಲ್ಯಾಣ ಯೋಜನೆಗಳು, ವಿದ್ಯಾರ್ಥಿ ವೇತನ ನಿಧಿ, ವಿವಾಹ ವೇದಿಕೆ, ಶೈಕ್ಷಣಿಕ ಸಂಸ್ಥೆಗಳು, ಮರಣ ಪರಿಹಾರ ನಿಧಿ, ಕ್ರೀಡಾ ಹಾಗೂ ಮನರಂಜನಾ, ಕ್ಲಬ್, ಸಾಂಸ್ಕೃತಿಕ ಚಟುವಟಿಕೆ, ವಿಧವಾ ನಿಧಿ ಮುಂತಾದವುಗಳನ್ನು ಹಮ್ಮಿಕೊಳ್ಳುವುದು.

q) ತನ್ನ ಸದಸ್ಯರಲ್ಲಿ ಪ್ರಜಾಪ್ರಭುತ್ವ ಜಾತ್ಯತೀತ ಹಾಗೂ ರಾಷ್ಟ್ರೀಯ ಅರಿವಿನ ಸ್ಪೂರ್ತಿಯನ್ನು ಹಾಗು ಸ್ವಸಹಾಯ ಸ್ವಾವಲಂಬನೆ ಹಾಗೂ ಸ್ವಾಭಿಮಾನವನ್ನು ತೀವ್ರಗೊಳಿಸುವುದು.

r) ಸಂಘದ ಹಿತಾಸಕ್ತಿಗಳಿಗೆ ಬಾಧಕವಲ್ಲದಂಥ ಷರತ್ತುಗಳಿಗೆ ಒಳಪಟ್ಟು ಸರಿಸಮಾನವಾದಂತಹ ಗುರಿಗಳು ಮತ್ತು ಧ್ಯೇಯೋದ್ದೇಶಗಳನ್ನು ಹೊಂದಿರುವ ಸರ್ಕಾರಿ ನೌಕರರ ಯಾವುದೇ ಇತರ ಸಂಘ ಅಥವಾ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳೊಡನೆ ಸಂಯೋಜನೆ ಏರ್ಪಡಿಸಿಕೊಳ್ಳುವುದು.

s) ಸಂಘದ ಧ್ಯೇಯೋದ್ದೇಶಗಳನ್ನು ಈಡೇರಿಸುವುದಕ್ಕಾಗಿ ಎಲ್ಲಾ ರೀತಿಯ ವಂತಿಕೆಗಳನ್ನು, ದಾನಗಳನ್ನು ಕೊಡುಗೆಗಳನ್ನು ಸಂಗ್ರಹಿಸುವುದು. ಮತ್ತು ಸ್ವೀಕರಿಸುವುದು ಹಾಗೂ ಇತರ ವಿಧಾನಗಳಿಂದ ನಿಧಿಗಳನ್ನು ಸಂಗ್ರಹಿಸುವುದು.

t) ಸದಸ್ಯರಲ್ಲಿ ದಕ್ಷತೆ, ಪ್ರಾಮಾಣಿಕತೆ, ನಿಸ್ಪೃಹತೆ, ಸಮಗ್ರತೆ ಹಾಗೂ ಇತರ ಉತ್ತಮ ಆಡಳಿತ/ ಸೇವಾ ಮೌಲ್ಯಗಳನ್ನು ಮೈಗೂಡಿಸಲು ಯತ್ನಿಸುವುದು.

u) ಸಂಘದ ಸಮರ್ಪಕ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ಅಗತ್ಯವಿರುವ ಚರ ಮತ್ತು ಸ್ಥಿರ ಸ್ವತ್ತುಗಳೆರಡನ್ನು ಅರ್ಜಿಸುವುದು ಮತ್ತು ಧಾರಣ ಮಾಡುವುದು.

v) ತನ್ನ ಸದಸ್ಯರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಸಂಘದ ಧ್ಯೇಯೋದ್ದೇಶಗಳನ್ನು ಮುಂದುವರಿಸುವುದಕ್ಕೆ ಅವಶ್ಯವಾದಂತಹ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಪೂರಕವಾದ ಇತರ ಕಾರ್ಯ ಚಟುವಟಿಕೆಗಳನ್ನು ನಡೆಸುವುದು.

w) ಮೇಲಿನ ಧ್ಯೇಯೋದ್ದೇಶಗಳನ್ನು ಮುಂದುವರೆಸಿಕೊಂಡು ಹೊಗುವಲ್ಲಿ ಪ್ರಾಸಂಗಿಕವಾದ ಮತ್ತು ಪ್ರಕಾರವಾದಂತಹ ಸಂಘ ರಚನೆಗೆ ಸಂಬಂಧಿಸಿದ ಇತರ ಕಾರ್ಯಗಳನ್ನು ಮಾಡುವುದು.

x) ಬೆಂಚ್ ಮಾರ್ಕ್ Disability ಹೊಂದಿರುವ ಅಂಧ ನೌಕರರಿಗೆ ಕಾನೂನು ಬದ್ದವಾಗಿ ಲಭ್ಯವಿರುವ ಮೀಸಲಾತಿಯನ್ನು ಒಳಗೊಂಡಂತೆ ಇತರ ಸೌಲಭ್ಯಗಳು ದುರುಪಯೋಗ ಆಗದಂತೆ ಯತ್ನಿಸುವುದು.

ರಚನೆ

a) ಕೇಂದ್ರ ಅಥವಾ ರಾಜ್ಯ ಸಂಘವು ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳನ್ನು ವಿಭಾಗಗಳನ್ನು ಒಳಗೊಂಡ ರಾಜ್ಯ ಸಂಸ್ಥೆಯಾಗಿರತಕ್ಕದ್ದು. ಇದು ಆಡಳಿತ ಮತ್ತು ಲೆಕ್ಕ ಪತ್ರಗಳ ವಿಷಯದಲ್ಲಿ ರಾಜ್ಯದಲ್ಲಿಯ ಜಿಲ್ಲೆ ಹಾಗೂ ವಿಭಾಗಿಯ ಪದಾಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರತಕ್ಕದ್ದು.

b) ಕರ್ನಾಟಕ ರಾಜ್ಯದಲ್ಲಿನ ರಾಜ್ಯ ಶಾಖೆಯೊಂದಿಗೆ ಅಗತ್ಯವೆನಿಸಿದಲ್ಲಿ ವಿಭಾಗೀಯ ಶಾಖೆಗಳನ್ನು ಕಾರ್ಯಕಾರಿ ಸಮಿತಿಯ ನಿರ್ಣಯದ ಮೇರೆಗೆ ರಚಿಸಬಹುದಾಗಿದೆ.

c) ಕಾರ್ಯಕಾರಿ ಸಮಿತಿಯ ಅಧಿಕಾರ ಅವಧಿಯು ಚುನಾವಣೆಯ ನಂತರದ ಪ್ರಥಮ ಸಭೆಯಿಂದ ಜಾರಿಗೆ ಬರುವಂತೆ 3 ವರ್ಷಗಳಾಗಿರುತ್ತದೆ.

ಸದಸ್ಯತ್ವ

ರಾಜ್ಯ ಪೋಲಿಸ್ ಮತ್ತು ಕಾರಾಗೃಹ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಹಾಗೂ ಕಾನೂನಿನ ಮೂಲಕ ವಿಶೇಷವಾಗಿ ನಿಷೇಧಿಸಲ್ಪಟ್ಟ ಮತ್ತು ಅಖಿಲ ಭಾರತ ಸೇವೆಯಿಂದ ಪಡೆದುಕೊಂಡ ಅಧಿಕಾರಿಗಳನ್ನು ಹೊರತುಪಡಿಸಿ ರಾಜ್ಯ ಸಂಚಿತ ನಿಧಿಯಿಂಧ ಸಂಬಳ ಇತ್ಯಾದಿ ಸಂದಾಯಗಳನ್ನು ಪಡೆಯುತ್ತಿರುವ ಕರ್ನಾಟಕ ಸರ್ಕಾರದಲ್ಲಿ ನಿಯೋಜಿತರಾದ ಎಲ್ಲಾ ಸರ್ಕಾರಿ ನೌಕರರು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಕರ್ನಾಟಕ ಲೋಕಸೇವಾ ಆಯೋಗ ಹಾಗೂ ವಿಧಾನ ಮಂಡಲದ ನೌಕರರು ಸೇರಿದಂತೆ ಹೆಚ್.ಆರ್.ಎಂ.ಎಸ್. ವ್ಯವಸ್ಥೆಗೆ ಒಳಪಡುವ ಮತ್ತು ಬೆಂಚ್‍ಮಾರ್ಕ್ ಡಿಸೆಬಿಲಿಟಿ ಹೊಂದಿರುವ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರು ಈ ಸಂಘದ ಸದಸ್ಯರಾಗಲು ಅರ್ಹರಾಗಿರುತ್ತಾರೆ.

ವಂತಿಗೆ

a) ಪ್ರವೇಶವನ್ನು ಪಡೆದುಕೊಂಡ ಮೇಲೆ ಪ್ರತಿಯೊಂದು ಕ್ಯಾಲೆಂಡರ್ ವರ್ಷ ಮುಕ್ತಾಯವಾಗುವುದಕ್ಕೆ ಮೊದಲು ಪ್ರತಿಯೊಬ್ಬ ಸದಸ್ಯನು ಕಾಲಕಾಲಕ್ಕೆ ಬದಲಾವಣೆಗೊಂಡು ನಿಗದಿಯಾಗುವ ವಾರ್ಷಿಕ ಶುಲ್ಕವನ್ನು ಸಂಘಕ್ಕೆ ಸಂದಾಯ ಮಾಡತಕ್ಕದ್ದು, ತಪ್ಪಿದಲ್ಲಿ ಅವನ/ ಅವಳ ಸಂಘದ ಸದಸ್ಯತ್ವವು ರದ್ದುಗೊಳ್ಳುವುದು.

b) ಸಂಘದ ಕಾರ್ಯಕಾರಿ ಮಂಡಳಿಯು ನಿರ್ದರಿಸುವ ಪ್ರದೇಶ ಶುಲ್ಕ ಮತ್ತು ವಾರ್ಷಿಕ ಸದಸ್ಯತ್ವ ನವೀಕರಣ ಶುಲ್ಕ ಹಾಗೂ ಕಾಲಕಾಲಕ್ಕೆ ನಿರ್ದಿಷ್ಠ ಉದ್ದೇಶಗಳಿಗಾಗಿ ಅಗತ್ಯಾನುಸಾರ ವಂತಿಕೆಗಳನ್ನು ಸಹ ಸಂದಾಯ ಮಾಡತಕ್ಕದ್ದು.

ಸದಸ್ಯತ್ವವು ರದ್ದುಗೊಳ್ಳುವಿಕೆ

a) ನಿವೃತ್ತಿ/ ರಾಜಿನಾಮೆ/ ವಜಾ/ ಕಡ್ಡಾಯ ನಿವೃತ್ತಿ/ ಮರಣದಿಂದಾಗಲಿ ಸೇವೆಯಿಂದ ಸದಸ್ಯತ್ವ ನಿಂತು ಹೋದಾಗ ಹಾಗೂ ಯಾವುದೇ ಸಂದರ್ಭದಲ್ಲಿ ಅಂಗವಿಕಲ ಹಕ್ಕುಗಳ ಅಧಿನಿಯಮ 2016ರ ಅನುಗುಣ ಹಾಗೂ ಜಾರಿಯಲ್ಲಿರಬಹುದಾದ ನಿಯಮಗಳನುಸಾರ ಯಾವುದೇ ಅಂಧ ನೌಕರರು ಬೆಂಚ್ ಮಾರ್ಕ್ ಡಿಸೆಬಿಲಿಟಿ ಹೊಂದಿಲ್ಲವೆಂದು ಸಾಬೀತಾದಲ್ಲಿ ಅಂತವರ ಸದಸ್ಯತ್ವ ರದ್ದುಗೊಳಿಸತಕ್ಕದ್ದು. ಹಾಗೆಯೇ ಕಾರ್ಯಕಾರಿ ಮಂಡಳಿ ಕೈಗೊಳ್ಳುವ ಶಿಸ್ತು ಕ್ರಮದ ಪರಿಣಾಮವಾಗಿಯೂ ಸಹ ಸದಸ್ಯತ್ವ ರದ್ದುಗೊಳ್ಳತಕ್ಕದ್ದು.

b) ಆದಾಗ್ಯು ಶುಲ್ಕವನ್ನು ಸಂದಾಯ ಮಾಡದಿರುವುದಕ್ಕಾಗಿ ಯಾವುದೇ ನೌಕರನ ಸದಸ್ಯತ್ವ ರದ್ದುಗೊಂಡಲ್ಲಿ ಸರ್ವಸದಸ್ಯರ ಸಭೆಯ (ಮಹಾಸಭೆಯ) ಅಧಿಸೂಚನೆಗೆ ಕನಿಷ್ಟ ಎರಡು ತಿಂಗಳಿಗೆ ಮೊದಲು ನಿಯಮಿಸಲಾದ ಶುಲ್ಕವನ್ನು ಸಂದಾಯ ಮಾಡಿ ಅವನು/ ಅವಳು ಹೊಸದಾಗಿ ಸದಸ್ಯರಾಗಿ ಸೇರಿಕೊಳ್ಳಲು ಅವಕಾಶವಿರುತ್ತದೆ. ಹೀಗೆ ಮರು ಸದಸ್ಯತ್ವ ಪಡೆದುಕೊಂಡ ಸದಸ್ಯರಿಗೆ ಮುಂದಿನ ಆರುತಿಂಗಳ ಅವಧಿಯಲ್ಲಿ ನಡೆಯಬಹುದಾದ ಯಾವುದೇ ಬಗೆಯ ಚುನಾವಣಾ ಪ್ರಕ್ರಿಯಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

c) ಅಲ್ಲದೆ ಸತತವಾಗಿ ಮೂರು ವಾರ್ಷಿಕ ಮಹಾಸಭೆಗಳಿಗೆ ಸದಸ್ಯರು ಗೈರು ಹಾಜರಾದರೆ ಸ್ವಯಂ ಚಾಲಿತವಾಗಿ ಅಂತಹ ಸದಸ್ಯರ ಸದಸ್ಯತ್ವವು ಮೂರನೆ ಮಹಾಸಭೆಯ ದಿನಾಂಕದಿಂದ ಜಾರಿಗೆ ಬರುವಂತೆ ರದ್ದುಗೊಳ್ಳುವುದು.

ಕೇಂದ್ರ/ ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ರಚನೆ ಮತ್ತು ಪ್ರಕಾರ್ಯಗಳು

1) ಒಟ್ಟಾರೆ ಆಡಳಿತ ಮತ್ತು ಕಾರ್ಯ ನೀತಿಯನ್ನು ರೂಪಿಸುವ ಅಧಿಕಾರಗಳು ಕಾರ್ಯಕಾರಿ ಸಮಿತಿಯಲ್ಲಿ ನಿಹಿತವಾಗಿರತಕ್ಕದ್ದು.

2) ಕೇಂದ್ರ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ನೇರವಾಗಿ ಆರ್ಹಸದಸ್ಯರಿಂದ ನಿಯತಕಾಲಿಕವಾಗಿ ನಡೆಯುವ ಚುನಾವಣೆಯಲ್ಲಿ ನೇರವಾಗಿ ಆಯ್ಕೆಯಾಗತಕ್ಕದ್ದು.

a) ಕಾರ್ಯಕಾರಿ ಸಮಿತಿಯ ಈ ಕೆಳಗೆ ಕಾಣಿಸಲಾದ ಪದಾಧಿಕಾರಿಗಳನ್ನು ಹೊಂದಿರುವುದು.

1) ಅಧ್ಯಕ್ಷರು (ಒಂದು ಹುದ್ದೆ ಸಾಮಾನ್ಯ)

2) ಉಪಾಧ್ಯಕ್ಷರು (ಎರಡು ಹುದ್ದೆ ಒಂದು ಸಾಮಾನ್ಯ ಒಂದು ಮಹಿಳೆಯರಿಗೆ ಮಿಸಲು)

3) ಪ್ರಧಾನ ಕಾರ್ಯದರ್ಶಿ (ಒಂದು ಹುದ್ದೆ ಸಾಮಾನ್ಯ)

4) ಕಾರ್ಯದರ್ಶಿ (ಒಂದು ಹುದ್ದೆ ಸಾಮಾನ್ಯ)

5) ಸಂಘಟನಾ ಕಾರ್ಯದರ್ಶಿ (ಒಂದು ಹುದ್ದೆ ಸಾಮಾನ್ಯ)

6) ಖಜಾಂಚಿ (ಒಂದು ಹುದ್ದೆ ಸಾಮಾನ್ಯ)

7) ನಿರ್ದೇಶಕರು (ಐದು ಹುದ್ದೆಗಳು) ಪ್ರತಿಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ನಾಲ್ಕು ಸಾಮಾನ್ಯ ಹುದ್ದೆಗಳು ಮತ್ತು ರಾಜ್ಯ ವ್ಯಾಪ್ತಿ ಅನ್ವಯವಾಗುವಂತೆ ಒಂದು ನಿರ್ದೇಶಕರ ಹುದ್ದೆಯು ಮಹಿಳೆಯರಿಗೆ ಮೀಸಲಾಗಿರತಕ್ಕದ್ದು.

b) ಕಾರ್ಯಕಾರಿ ಸಮಿತಿಯ ಕರ್ತವ್ಯಗಳು ಮತ್ತು ಪ್ರಕಾರ್ಯಗಳು:

1) ಕಾರ್ಯಕಾರಿ ಸಮಿತಿಯು ಕೇಂದ್ರ ಸಂಘದ ಕಾರ್ಯಕಾರಿ ಸಮಿತಿಯಾಗಿ ಈ ಮುಂದಿನ ಪ್ರಕಾರ್ಯಗಳನ್ನು ನಡೆಸುವುದಕ್ಕಾಗಿ ಅವಶ್ಯಕವಾದಂತಹ ತಿರ್ಮಾನಗಳನ್ನು ತೆಗೆದುಕೊಳ್ಳತಕ್ಕದ್ದು. ಅಂತಹ ತಿರ್ಮಾನಗಳು ಅವಶ್ಯವಿದ್ದಲ್ಲಿ ಅವುಗಳ ಅನುಸಮರ್ಥನೆಗಾಗಿ ವಾರ್ಷಿಕ ಮಹಾಸಭೆಯ ಮುಂದೆ ಇಡತಕ್ಕದ್ದು.

2) ಕಾರ್ಯಕಾರಿ ಸಮಿತಿಯು ಸಂಘಟನೆಯ ಕಾರ್ಯಕ್ಕಾಗಿ ಕರ್ನಾಟಕ ರಾಜ್ಯದ ಒಳಗಿನ/ ಹೊರಗಿನ ಯಾವುದೇ ಪ್ರದೇಶಕ್ಕೆ ತನ್ನ ಸದಸ್ಯರನ್ನು ನಿಯೋಜಿಸುವ ಅಧಿಕಾರವನ್ನು ಹೊಂದಿರತಕ್ಕದ್ದು ಹಾಗೂ ಹೀಗೆ ನಿಯೋಜಿಸಲ್ಪಟ್ಟ ಸದಸ್ಯರು ಅಧ್ಯಕ್ಷರಿಗೆ ವರದಿಯನ್ನು ಸಲ್ಲಿಸತಕ್ಕದ್ದು ಹಾಗೂ ಅಗತ್ಯವಿದ್ದಲ್ಲಿ ಮುಂದಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಂಡಿಸತಕ್ಕದ್ದು.

3) ಆಡಳಿತ ಕಾರ್ಯಕಾರಿ ಸಮಿತಿಯು ಸರ್ಕಾರವು ಅಥವಾ ಯಾವುದೇ ಅಧೀನ ಪ್ರಾಧಿಕಾರವು ನೇಮಕ ಮಾಡಿದ ಯಾವುದೇ ಸಮಿತಿಯಲ್ಲಿ ಸೇವೆ ಸಲ್ಲಿಸುವುದಕ್ಕಾಗಿ ಸಂಘದ ಸದಸ್ಯರನ್ನು ಅಥವಾ ಪದಾಧಿಕಾರಿಗಳನ್ನು ಅಂತಹ ಸಮಿತಿಗಳಲ್ಲಿ ಸಂಘದ ಪ್ರತಿನಿಧಿಗಳನ್ನಾಗಿ ರಾಜ್ಯ ಮಟ್ಟದಲ್ಲಿ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಂದಿರತಕ್ಕದ್ದು. ಒಂದು ವೇಳೆ ಅಂತಹ ಸಮಿತಿಯನ್ನು ಸರ್ಕಾರವು ಅಥವಾ ಅದಕ್ಕೆ ಅಧೀನವಾದ ಯಾವುದೇ ಇತರ ಪ್ರಾಧಿಕಾರ ಜಿಲ್ಲಾ ಅಥವಾ ತಾಲ್ಲೂಕು ಮಟ್ಟದಲ್ಲಿ ನೇಮಕ ಮಾಡಿದ ಸಮಿತಿ ಆಗಿದ್ದಲ್ಲಿ ಅಂತಹ ಜಿಲ್ಲೆಯ ಜಿಲ್ಲಾಕಾರ್ಯದರ್ಶಿಯವರನ್ನು ಅಥವಾ ಸದರಿ ಸಮಿತಿಯಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಪರಿಣಿತ ಸಂಘದ ಸದಸ್ಯರು/ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿಯನ್ನು ನೇಮಕ ಮಾಡತಕ್ಕದ್ದು.

4) ಕಾರ್ಯಕಾರಿ ಸಮಿತಿಯು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಆಂದೋಲನ ಮತ್ತು ಸಮ್ಮೇಳನಗಳು ಹಾಗೂ ಸಮಾನ ಧ್ಯೇಯೋದ್ದೇಶವುಳ್ಳ ಅಂಧ ಸಮುದಾಯದ ಹಿತಾಸಕ್ತಿಗಳಿಗೆ ಶ್ರಮಿಸುತ್ತಿರುವ ಇತರ ಸಂಘ ಸಂಸ್ಥೆಗಳ ಸಭೆ-ಸಮಾರಂಭ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಲು ಕಾರ್ಯಕಾರಿ ಸಮಿತಿಯು ಯಾವುದೇ ಪದಾಧಿಕಾರಿಯವರನ್ನು ಅಥವಾ ಸದಸ್ಯರ ಪರಿಣಿತ ತಂಡವನ್ನು ನಿಯೋಜಿಸುವ ಅಧಿಕಾರವನ್ನು ಹೊಂದಿರತಕ್ಕದ್ದು.

5) ಕಾರ್ಯಕಾರಿ ಸಮಿತಿಯ ಸಂಘದೊಡನೆ ಸಂಯೋಜನೆ ಮಾಡಿಕೊಳ್ಳಲು ಇಚ್ಚಿಸುವ ಯಾವುದೇ ಇತರ ಸೇವಾ ಸಂಸ್ಥೆ ಅಥವಾ ಸರ್ಕಾರಿ ನೌಕರರ ಸಂಘದ ಮನವಿಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಹೊಂದಿರತಕ್ಕದ್ದು.

6) ಕಾರ್ಯಕಾರಿ ಸಮಿತಿಯು ಸಂಘವು ಹೊಂದಿರುವಂತಹುದೇ ದ್ಯೇಯೋದ್ದೇಶಗಳನ್ನು ಹೊಂದಿರುವ ಸರ್ಕಾರಿ ನೌಕರರ ಯಾವುದೇ ಇತರ ಸಂಸ್ಥೆ ಅಥವಾ ಸಂಘದೊಡನೆ ಸಂಯೋಜನೆ ರಚಿಸಿಕೊಳ್ಳವ ಅಧಿಕಾರವನ್ನು ಅದು ಹೊಂದಿರತಕ್ಕದ್ದು.

7) ಕಾರ್ಯಕಾರಿ ಸಮಿತಿಯು ಸಂಘದ ಹಿತಾಸಕ್ತಿಯ ದೃಷ್ಟಿಯಿಂದ ಸಂಯೋಜಿತ ಸೇವಾ ಒಕ್ಕೂಟ ಅಥವಾ ಸಂಘಗಳಿಂದ ಕಾರ್ಯಕಾರಿ ಸಮಿತಿಯು ನಿಯಮಿಸಬಹುದಾದ ಮೊತ್ತದ ವಾರ್ಷಿಕ ವಂತಿಗೆಯನ್ನು ಪಡೆಯುವುದು.

c) ಕಾರ್ಯಕಾರಿ ಸಮಿತಿಯ ಸಭೆ:

1) ಕಾರ್ಯಕಾರಿ ಸಮಿತಿಯು ಕನಿಷ್ಠ ಮೂರು ತಿಂಗಳಿಗೆ ಕಡಿಮೆ ಇಲ್ಲದಂತೆ ನಿಯಮಿತ ಸಭೆಗಳನ್ನು ನಡೆಸತಕ್ಕದ್ದು.

2) ಅಗತ್ಯವೆನಿಸಿದ್ದಲ್ಲಿ ಅವಶ್ಯ ಸಂದರ್ಭಗಳಲ್ಲಿ ತುರ್ತು ಸಭೆಗಳನ್ನು ಕರೆಯಲು ಅಧ್ಯಕ್ಷರು ಅಧಿಕಾರ ಹೊಂದಿರತಕ್ಕದ್ದು.

3) ಮೂರು ಕಾರ್ಯಕಾರಿ ಸಮಿತಿಯ ಸಭೆಗಳಿಗೆ ನಿರಂತರವಾಗಿ ಗೈರು ಹಾಜರಾಗುವ ಪದಾಧಿಕಾರಿಗಳ ಹುದ್ದೆಯು ಸ್ವಯಂ ಚಾಲಿತವಾಗಿ ರದ್ದುಗೊಳ್ಳತಕ್ಕದ್ದು.

4) ಕಾರ್ಯಕಾರಿ ಸಮಿತಿಯು ತನ್ನ ಸಭೆಗಳಿಗೆ ಕನಿಷ್ಠ 10 ಪೂರ್ಣ ದಿನಗಳಿಗೆ ಕಡಿಮೆ ಇಲ್ಲದಂತೆ ಅಥವಾ ತುರ್ತುಸಭೆಗಳಿಗೆ ಕನಿಷ್ಠ 3 ಪೂರ್ಣದಿನಗಳಿಗೆ ಕಡಿಮೆ ಇಲ್ಲದಂತೆ ನೋಟಿಸ್ ಜಾರಿಗೊಳಿಸತಕ್ಕದ್ದು. ಹೀಗೆ ಜಾರಿಗೊಳಿಸುವ ನೋಟಿಸ್‍ಗಳನ್ನು ಅಂಚೆ ಮುಖಾಂತರ ಇಮೇಲ್ ಅಥವಾ ಇನ್ಯಾವುದೇ ಎಲೆಕ್ಟ್ರಾನಿಕ್ ಮಾದ್ಯಮ ಮುಖಾಂತರ ಜಾರಿಗೊಳಿಸಬಹುದಾಗಿರುತ್ತದೆ.

5) ಕಾರ್ಯಕಾರಿ ಸಮಿತಿಯ ಸಭೆಗಳು ನಡೆಯಲು ಒಟ್ಟು 12 ಜನ ಪದಾಧಿಕಾರಿಗಳ ಪೈಕಿ ಕನಿಷ್ಠ ಒಂಬತ್ತು ಜನ ಪದಾಧಿಕಾರಿಗಳು ಅಂದರೆ 3/4 ರಷ್ಟು ಪದಾಧಿಕಾರಿಗಳ ಹಾಜರಾತಿಯು ಸಭೆಯ ಕೊರಂಗೆ ಅಗತ್ಯವಿರುತ್ತದೆ. ಒಂದು ವೇಳೆ ಕೊರಂನ ಕೊರತೆಯಿಂದ ಸಭೆಯು ರದ್ದುಕೊಂಡಲ್ಲಿ ಮುಂದಿನ ಮರು ನಿಗದಿಯಾದ ಸಭೆ ನಡೆಯಲು ಯಾವುದೇ ಕೊರಂನ ಅಗತ್ಯವಿರುವುದಿಲ್ಲ.

6) ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸಲು ಒಟ್ಟು ಹಾಜರಿದ್ದು ಮತ ಚಲಾಯಿಸಿದ ಸದಸ್ಯರಲ್ಲಿ 2/3 ರಷ್ಟು ಪದಾಧಿಕಾರಿಗಳ ಸಹಮತ ಅಗತ್ಯವಿರುತ್ತದೆ. ಕೆಲವು ಸಂದರ್ಭಗಳಲ್ಲಿ ಒಟ್ಟು ಪದಾಧಿಕಾರಿಗಳ ಪೈಕಿ ಶೇ 50% ರಷ್ಟು ಸದಸ್ಯರು ಸರ್ಕಾರದ ಮೇರೆಗೆ ತುರ್ತು ಕಾರ್ಯಕಾರಿ ಸಮಿತಿಯ ಸಭೆ ನಡೆಸುವಂತೆ ಅಧ್ಯಕ್ಷರಿಗೆ ಲಿಖಿತವಾಗಿ ಮನವಿ ಸಲ್ಲಿಸಿದಲ್ಲಿ ಮನವಿ ಸಲ್ಲಿಸಿದ ದಿನಾಂಕದಿಂದ 15 ದಿನಗಳ ಒಳಗೆ ಅಂತಹ ತುರ್ತುಕಾರ್ಯಕಾರಿ ಸಮಿತಿಯ ಸಭೆಯನ್ನು ಆಯೋಜಿಸತಕ್ಕದ್ದು.

7) ಕೇಂದ್ರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಹುದ್ದೆಯಲ್ಲಿ ಯಾವುದಾದರೂ ಹುದ್ದೆಯು ರಾಜಿನಾಮೆ/ ಸೇವೆಯಿಂದ ವಜಾಗೊಳ್ಳುವಿಕೆ, ಮರಣ ಅಥವಾ ಇನ್ನಿತರ ಕಾರಣಗಳಿಂದ ತೆರವಾದ ಹುದ್ದೆಗಳಿಗೆ ಕಾರ್ಯಕಾರಿ ಸಮಿತಿಯ ತನ್ನ ಸಭೆಯಲ್ಲಿ ಸೂಕ್ತ ವ್ಯಕ್ತಿಯನ್ನು ಮುಂದಿನ ಚುನಾವಣೆಯವರೆಗೆ ಆಯ್ಕೆ ಮಾಡಿಕೊಳ್ಳಬಹುದು.

8) ಅಗತ್ಯವೆನಿಸಿದ್ದಲ್ಲಿ ಗೌರವ ಸಲಹೆಗಾರರನ್ನು ನೇಮಿಸಿಕೊಳ್ಳತಕ್ಕದ್ದು.

d) ಕಾರ್ಯಕಾರಿ ಸಮಿತಿಯ ಅವಧಿ: ಕೇಂದ್ರ ಅಥವಾ ರಾಜ್ಯ ಕಾರ್ಯಕಾರಿ ಸಮಿತಿಯ ಅಧಿಕಾರವಧಿಯು ಚುನಾವಣೆಯ ಮಹಾಸಭೆಯ ದಿನಂಕದಿಂದ 3 ವರ್ಷಗಳಾಗಿರತಕ್ಕದ್ದು.

ರಾಜ್ಯ ಪರಿಷತ್ತಿನ ರಚನೆ/ ಪ್ರಕಾರ್ಯಗಳು ಮತ್ತು ಸಭೆಗಳು

a) ರಾಜ್ಯಪರಿಷತ್ ರಚನೆ.

ರಾಜ್ಯ ಪರಿಷತ್ತಿನಲ್ಲಿ ಚುನಾಯಿತ ಕೇಂದ್ರ/ ರಾಜ್ಯ ಸಂಘದ ಪದಾಧಿಕಾರಿಗಳು ರಾಜ್ಯದ ಕಂದಾಯ ಜಿಲ್ಲೆಗಳಿಂದ ಚುನಾಯಿತ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಈ ರಾಜ್ಯ ಪರಿಷತ್ತಿನ ಸದಸ್ಯರಾಗಿದ್ದು ಇದರ ಜೊತೆಗೆ ಸಂಘದ ಸಂಸ್ಥಾಪಕ ಸದಸ್ಯರು ಅಂದರೆ (Ad hoc Committee) ಸದಸ್ಯರುಗಳು ಸರ್ಕಾರಿ ಸೇವೆಯಲ್ಲಿದ್ದರೆ ಇದರ ಪದನಿಮಿತ್ತ ಸದಸ್ಯರಾಗಿರತಕ್ಕದ್ದು.

b) ರಾಜ್ಯ ಪರಷತ್ತಿನ ಪ್ರಕಾರ್ಯಗಳು:

1) ಸಂಘದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅಗತ್ಯಾ ಸಲಹೆ ಸೂಚನೆಗಳನ್ನು ಕೇಂದ್ರ ಕಾರ್ಯಕಾರಿ ಸಮಿತಿಗೆ ನೀಡುವುದು.

2) ಕೇಂದ್ರ ಅಥವಾ ರಾಜ್ಯ ಕಾರ್ಯಕಾರಿ ಸಮಿತಿಯು ಬಯಸುವ ಯಾವುದೇ ಅಂಶಗಳ ಬಗ್ಗೆ ಚರ್ಚಿಸುವುದು ಮತ್ತು ಅನುಷ್ಠಾನಗೊಳಿಸುವಲ್ಲಿ ಕಾರ್ಯಕಾರಿ ಸಮಿತಿಯೊಂದಿಗೆ ಕೈ ಜೋಡಿಸುವುದು.

3) ಮಹಾಸಭೆಯ ಹೊರತಾಗಿಯೂ ಸಮುದಾಯದ ಹಿತದೃಷ್ಠಿಯಿಂದ ತುರ್ತು ನಿರ್ಣಯಗಳನ್ನು ರಾಜ್ಯ ಪರಿಷತ್ತಿನಲ್ಲಿ ಕೈಗೊಳ್ಳುವುದು.

4) ಕೇಂದ್ರ ಕಾರ್ಯಕಾರಿ ಸಮಿತಿಯ ಆಡಳಿತ ವೈಖರಿಯ ಪ್ರಗತಿ ಪರಿಶೀಲನೆ ನಡೆಸುವುದು ಮತ್ತು ಅಗತ್ಯಾ ಮಾರ್ಗದರ್ಶನ ನೀಡುವುದು.

5) ರಾಜ್ಯ ಪರಿಷತ್ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವ ಅಧಿಕಾರವನ್ನು ಮಾತ್ರ ಹೊಂದಿರತಕ್ಕದ್ದು ಮತ್ತು ಕಾರ್ಯಕಾರಿ ಸಮಿತಿಯು ವಹಿಸಿಕೊಡಬಹುದಾದ ಜವಬ್ದಾರಿಗಳನ್ನು ನಿರ್ವಹಿಸತಕ್ಕದ್ದು.

 

c) ರಾಜ್ಯ ಪರಿಷತ್ತಿನ ಸಭೆಗಳು:

1) ರಾಜ್ಯ ಪರಷತ್ತಿನ ಸಭೆಗಳು ಕನಿಷ್ಠ 6 ತಿಂಗಳಿಗೆ ಕಡಿಮೆಯಿಲ್ಲದಂತೆ ನಡೆಯತಕ್ಕದ್ದು.

2) ಈ ಸಭೆಗಳ ಅಧ್ಯಕ್ಷತೆಯನ್ನು ಕಾರ್ಯಕಾರಿ ಸಮಿತಿಯು ಅದ್ಯಕ್ಷರೇ ವಹಿಸತಕ್ಕದ್ದು.

3) ಇಂತಹ ಸಭೆಗಳು ನಡೆಯುವ 21 ದಿನಗಳಿಗೆ ಮುಂಚಿತವಾಗಿಯೆ ತನ್ನ ಸದಸ್ಯರಿಗೆ ಅಂಚೆ/ ಇ-ಮೇಲ್ ಅಥವಾ ಯಾವುದೆ ಬಗೆಯ ಎಲೆಕ್ಟ್ರಾನಿಕ್ ಮಧ್ಯಮಗಳ ಮೂಲಕ ನೋಟಿಸ್ ನೀಡುವುದು.

4) ಇಂತಹ ಸಭೆಗಳನ್ನು ಕರೆಯುವ ತಿರ್ಮಾನವು ಕೇಂದ್ರ ಕಾರ್ಯಕಾರಿ ಸಮಿತಿಯ ವಿವೇಚನೆಗೆ ಇರತಕ್ಕದ್ದು.

5) ಕೇಂದ್ರ ಪರಿಷತ್ ಸಭೆ ನಡೆಯಲು ತನ್ನ ಒಟ್ಟು ಸದಸ್ಯರ ಪೈಕಿ ಶೇ 50 ರಷ್ಟು ಜನ ಸದಸ್ಯರ ಹಾಜರಾತಿಯು ಸಭೆಯ ಕೋರಂಗೆ ಅಗತ್ಯವಿರುತ್ತದೆ ಮತ್ತು ಹೀಗೆ ನಡೆದ ಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸಿದ ಒಟ್ಟು ಸದಸ್ಯರ ಪೈಕಿ 2/3 ರಷ್ಟು ಸದಸ್ಯರ ಸಹ ಮತವು ನಿರ್ಣಯಗಳನ್ನು ಅಂಗೀಕರಿಸಲು ಅಗತ್ಯವಿರುತ್ತದೆ.

6) ಕೆಲವು ಸಂದರ್ಭಗಳಲ್ಲಿ ರಾಜ್ಯ ಪರಿಷತ್ತಿನ ಒಟ್ಟು ಸದಸ್ಯರ ಪೈಕಿ ಶೇ 50% ರಷ್ಟು ಜನ ಸದಸ್ಯರ ಸಕಾರಣದ ಮೇರೆಗೆ ತುರ್ತು ಪರಿಷತ್ ಸಭೆ ಕರೆಯಲು ಅಧ್ಯಕ್ಷರಿಗೆ ಲಿಖಿತವಾಗಿ ಮನವಿ ಸಲ್ಲಿಸಿದಲ್ಲಿ, ಮನವಿ ಸ್ವಿಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಅಂತಹ ತುರ್ತು ಸಭೆಯನ್ನು ಕರೆಯಲು ಅಧ್ಯಕ್ಷರು ಕ್ರಮ ವಹಿಸುವುದು.

d) ರಾಜ್ಯ ಪರಿಷತ್ತಿನ ಅವಧಿ:

ರಾಜ್ಯ ಪರಿಷತ್ತಿನ ಅವಧಿಯು ಚುನಾವಣೆ ನಡೆದ ಮಹಾಸಭೆಯ ದಿನಾಂಕದಿಂದ 3 ವರ್ಷಗಳಾಗಿರುತ್ತದೆ.

ಮಹಾಸಭೆ

a) ರಾಜ್ಯ ಅಥವಾ ಕೇಂದ್ರ ಸಂಘದ ಸರ್ವಸದಸ್ಯರ ಸಭೆಯು ಮಹಾ ಸಭೆಯಾಗಿರತಕ್ಕದ್ದು ಹಾಗೂ ಈ ಮುಂದಿನ ಸಭೆಗಳನ್ನು ನಡೆಸಲು ಕೇಂದ್ರ ಸ್ಥಾನದಲ್ಲಿ ಅಥವಾ ಕೇಂದ್ರ ಕಾರ್ಯಕಾರಿ ಸಮಿತಿಯು ನಿರ್ಧರಿಸುವ ಯಾವುದೇ ಸ್ಥಳದಲ್ಲಿ ಮಹಾ ಸಭೆಗಳು ನಡೆಯತಕ್ಕದ್ದು ಇಂತಹ ಮಹಾಸಭೆಗಳನ್ನು ಪ್ರತಿ ವರ್ಷಕ್ಕೊಮ್ಮೆ ಆಯೋಜಿಸತಕ್ಕದ್ದು.

b) ಕೇಂದ್ರ ಕಾರ್ಯಕಾರಿ ಸಮಿತಿಯ ಚಟುವಟಿಕೆಗಳ ಪುನರಾವಲೋಕನ ಮತ್ತು ದಾಖಲೆಗಳ ಮಂಡನೆ.

c) ಹಿಂದಿನ ವರ್ಷದ ಲೆಕ್ಕವನ್ನು ಪರಿಗಣಿಸುವುದು ಮತ್ತು ಅಂಗೀಕರಿಸುವುದು.

d) ರಾಜ್ಯ ಸರ್ಕಾರಿ ಅಂಧ ನೌಕರರಿಗೆ ಸಂಬಂಧಿಸಿದ ವಿವಿಧ ಮಹತ್ವದ ವಿಷಯಗಳನ್ನು ಕುರಿತಂತೆ ಠರಾವುಗಳನ್ನು ಅಳವಡಿಕೊಳ್ಳುವುದು.

e) ಮುಂಬರುವ ವರ್ಷದ ಚಟುವಟಿಕೆಗಳು ಮತ್ತು ಆಯವ್ಯಯಗಳನ್ನು ರೂಪಿಸುವುದು.

f) ಅಧ್ಯಕ್ಷರ ಪೂರ್ವ ಅನುಮತಿಯೊಂದಿಗೆ ಯಾವುದೇ ಇತರ ವಿಷಯವನ್ನು ಚರ್ಚಿಸುವುದು.

g) ಅರ್ಹ ರಾಜ್ಯ ಸರ್ಕಾರಿ ಅಂಧ ನೌಕರರ ಸದಸ್ಯರನ್ನು ಒಂದುಗೂಡಿಸಿ ಪ್ರತಿ ಕ್ಯಾಲೆಂಡರ್ ವರ್ಷಕ್ಕೊಮ್ಮೆ ವಾರ್ಷಿಕ ಮಹಾಸಭೆಯನ್ನು ಅಯೋಜಿಸುವುದು ಕೇಂದ್ರ ಕಾರ್ಯಕಾರಿ ಸಮಿತಿಯ ಕರ್ತವ್ಯವಾಗಿರತಕ್ಕದ್ದು. ಇಂತಹ ಸಭೆಗಳ ಕ್ರಮಬದ್ದ ನಡವಳಿಗಳನ್ನು ರೂಪಿಸಿ ನಡೆಸುವುದು ಸಹ ಕೇಂದ್ರ ಕಾರ್ಯಕಾರಿ ಸಮಿತಿಯ ಜವಬ್ದಾರಿಯಾಗಿರತಕ್ಕದ್ದು.

h) ಹೊಸದಾಗಿ ಚುನಾವಣೆಗಳು ನಡೆದಾಗ ಹೊಸದಾಗಿ ಚುನಾಯಿತರಾದ ಪದಾಧಿಕಾರಿಗಳಿಗೆ ಪದದ ಪ್ರಭಾರವನ್ನು ಒಪ್ಪಿಸಿಕೊಡುವುದು ಕೇಂದ್ರ ಪದಾಧಿಕಾರಿಗಳು ಹಾಗೂ ಜಿಲ್ಲಾ ಸಂಘಟನಾ ಕಾರ್ಯದಶಿಗಳ ಕರ್ತವ್ಯವಾಗಿರತಕ್ಕದ್ದು.

ಮಹಾ ಸಭೆಯ ನೋಟಿಸ್

a) ವಾರ್ಷಿಕ ಮಹಾಸಭೆಗಳು ನಡೆಯುವ ಮುನ್ನ 21 ಪೂರ್ಣ ದಿನಗಳಿಗೆ ಕಡಿಮೆ ಇಲ್ಲದಂತೆ ತನ್ನ ಸದಸ್ಯರಿಗೆ ಅಂಚೆ/ ಇ-ಮೇಲ್ ಅಥವಾ ಇನ್ನಿತರ ದೃಢೀಕರಣಕ್ಕೆ ಒಳಪಡುವ ಎಲೆಕ್ಟ್ರಾನಿಕ್ ಮಾದ್ಯಮಗಳ ಮೂಲಕ ನೋಟಿಸ್ ನೀಡುವುದು ಮತ್ತು ಚುನಾವಣೆ ನಡೆಯುವ ಮಹಾಸಭೆಗಳ ಬಗ್ಗೆ ಮೇಲಿನವುಗಳ ಜೊತೆಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಣೆ ನೀಡುವುದು ಮತ್ತು ಇಂತಹ ನೋಟಿಸ್‍ಗಳಲ್ಲಿ ಸಭೆಯ ಕಾರ್ಯಸೂಚಿಯ ಬಗ್ಗೆಯೂ ಪೂರ್ವ ಮಾಹಿತಿ ನೀಡುವುದು.

b) ಮಹಾ ಸಭೆಯಲ್ಲಿ ಕೋರಂ:

ಸಭೆಯು ತನ್ನ ಕಾರ್ಯಕಲಾಪಗಳನ್ನು ನಡೆಸಲು ಒಟ್ಟು ಅರ್ಹ ಸದ್ಯಸರ ಪೈಕಿ ಶೇ 50% ರಷ್ಟು ಸದಸ್ಯರು ಹಾಜರಿರತಕ್ಕದ್ದು ಮತ್ತು ಹೀಗೆ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸಲು ಹಾಜರಿದ್ದ ಒಟ್ಟು ಸದಸ್ಯರ ಪೈಕಿ 2/3 ರಷ್ಟು ಮತ ಚಲಾಯಿಸಿದ ಸದಸ್ಯರ ಸಹ ಮತವು ಅವಶ್ಯವಿರುತ್ತದೆ.

c) ಠರಾವುಗಳು:

ಪದಾಧಿಕಾರಿಗಳಲ್ಲದ ಸದಸ್ಯರು ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು ಅಥವಾ ಅಂಗೀಕರಿಸಬೇಕಾದ ಠರಾವುಗಳನ್ನು ಸಭೆಯು ನಡೆಯುವ ದಿನಕ್ಕಿಂತ ಕನಿಷ್ಟ 7 ದಿನಗಳಿಗೆ ಮುಂಚಿತವಾಗಿ ಪ್ರಧಾನ ಕಾರ್ಯದರ್ಶಿಯವರಿಗೆ ಕಳುಹಿಸಿರತಕ್ಕದ್ದು.

ತುರ್ತುಸಭೆ

ಕೆಲವೊಂದು ವಿಶೇಷ ಸಂದರ್ಭದಲ್ಲಿ ಸಮುದಾಯದ ಹಿತದೃಷ್ಟಿಯ ಅನಿವಾರ್ಯ ಪರಿಸ್ಥಿತಿಯಲ್ಲಿ ತುರ್ತುಮಹಾಸಭೆಯನ್ನು ಕರೆಯಲು ಒಟ್ಟು ಸದಸ್ಯರ ಪೈಕಿ ಶೇ 50% ರಷ್ಟು ಸದಸ್ಯರು ಮಹಾಸಭೆ ನಡೆಸಲು ಅಧ್ಯಕ್ಷರಿಗೆ ಲಿಖಿತ ಮನವಿ ಸಲ್ಲಿಸಿದರೆ ಅಂತಹ ಮನವಿ ಸ್ವೀಕರಿಸಿದ ದಿನಾಂಕದಿಂದ ಕಾರ್ಯಕಾರಿ ಮಂಡಳಿ ನಿರ್ಣಯ ಕೈಗೊಂಡು 40 ದಿನಗಳ ಒಳಗೆ ಮಹಾಸಭೆಯನ್ನು ನಡೆಸುವುದು.

ಚುನಾವಣೆಗಳು

a) ಚುನಾವಣೆಗಳು ಕೇಂದ್ರ ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಿಗೆ ಅಂದರೆ ಈ ಮುಂದಿನ ಪಟ್ಟಿಯಲ್ಲಿ ನೀಡಿರುವ ಹುದ್ದೆಗಳಿಗೆ ಮಹಾಸಭೆಯಲ್ಲಿ ನಡೆಯುವ ಚುನಾವಣೆಗಳ ಮೂಲಕ ಚುನಾಯಿಸುವುದು.

1) ಅಧ್ಯಕ್ಷರು (ಒಂದು ಹುದ್ದೆ) ಸಾಮಾನ್ಯ

2) ಉಪಾಧ್ಯಕ್ಷರು (ಎರಡು ಹುದ್ದೆ 1 ಸಾಮಾನ್ಯ/ 1ಮಹಿಳೆಯರಿಗೆ ಮೀಸಲು)

3) ಪ್ರಧಾನ ಕಾರ್ಯದರ್ಶಿ (ಒಂದು ಹುದ್ದೆ ಸಾಮಾನ್ಯ)

4) ಕಾರ್ಯದರ್ಶಿ (ಒಂದು ಹುದ್ದೆ ಸಾಮಾನ್ಯ)

5) ಸಂಘಟನಾ ಕಾರ್ಯದರ್ಶಿ (ಒಂದು ಹುದ್ದೆ ಸಾಮಾನ್ಯ)

6) ಖಜಾಂಚಿ (ಒಂದು ಹುದ್ದೆ ಸಾಮಾನ್ಯ)

7) ಮಹಿಳಾ ನಿರ್ದೇಶಕರು (ಒಂದು ಹುದ್ದೆ ಮಹಿಳಾ ಸದಸ್ಯರಿಗೆ ಮಾತ್ರ ಮೀಸಲು)

ಈ ಮೇಲಿನ ಎಲ್ಲಾ ಹುದ್ದೆಗಳು ಸಂಘದ ಎಲ್ಲಾ ಅರ್ಹ ಸದಸ್ಯರಿಂದ ನೇರವಾಗಿ ಚುನಾವಣೆಯ ಮೂಲಕ ಚುನಾಯಿಸತಕ್ಕದ್ದು.

8) ವಿಭಾಗೀಯ ನಿರ್ದೇಶಕರು (ನಾಲ್ಕು ಹುದ್ದೆ ಸಾಮಾನ್ಯರಿಗೆ) ಈ ಹುದ್ದೆಗಳಿಗೆ ಆಯಾ ಕಂದಾಯ ವಿಭಾಗಗಳಲ್ಲಿ ಕರ್ತವ್ಯ ನಿರ್ವಸುತ್ತಿರುವ ಅರ್ಹ ಸದಸ್ಯರು ತಮ್ಮ ವಿಭಾಗದ ನಿರ್ದೇಶಕರುಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಿಕೊಳ್ಳತಕ್ಕದ್ದು.

9) ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು (ಜಾರಿಯಲ್ಲಿರುವ ಕಂದಾಯ ಜಿಲ್ಲೆಗಳಿಗೆ ತಲಾ ಒಂದೊಂದು ಹುದ್ದೆ ಸಾಮಾನ್ಯರಿಗೆ ಇರುತ್ತದೆ) ಈ ಹುದ್ದೆಗಳಿಗೆ ಆಯಾ ಕಂದಾಯ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಸದಸ್ಯರು ಚುನಾವಣೆಗಳ ಮೂಲಕ ಆರಿಸಿಕೊಳ್ಳತಕ್ಕದ್ದು.

10) ಈ ಮೇಲಿನ 12 ಜನ ಕೇಂದ್ರ ಪದಾಧಿಕಾರಿಗಳು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳನ್ನು ಆಯ್ಕೆ ಮಾಡುವ ಚುನಾವಣಾ ದಿನಾಂಕವನ್ನು ಮತ್ತು ಸ್ಥಳವನ್ನು ಕೇಂದ್ರ ಕಾರ್ಯಕಾರಿ ಸಮಿತಿಯು ನಿರ್ಣಯಿಸಿ ಪ್ರಕಟಿಸತಕ್ಕದ್ದು.

11) ಇಂತಹ ಚುನಾವಣೆಗಳನ್ನು ನಡೆಸಲು ಸಂಘದ ಪದಾಧಿಕಾರಿಗಳು/ ಸದಸ್ಯರಲ್ಲದ ವ್ಯಕ್ತಿಯನ್ನು ಕೇಂದ್ರ ಕಾರ್ಯಕಾರಿ ಸಮಿತಿಯು ನಿರ್ಣಯ ಕೈಗೊಂಡು ಚುನಾವಣಾ ಅಧಿಕಾರಿಯೊಬ್ಬರನ್ನು ಮತ್ತು ಅಗತ್ಯಾನುಸಾರ ಸಹಾಯಕರನ್ನು ನೇಮಿಸುವುದು.

12) ಚುನಾವಣಾ ಅಧಿಕಾರಿಗಳು ಕಾರ್ಯಕಾರಿ ಸಮಿತಿಯೊಡನೆ ಚರ್ಚಿಸಿ ಚುನಾವಣಾ ದಿನಾಂಕ/ ನಾಮ ಪತ್ರ ಸಲ್ಲಿಸುವ ದಿನಾಂಕ/ ನಾಮಪತ್ರ ಪರಿಶೀಲನಾ ದಿನಾಂಕ ಮತ್ತು ನಾಮ ಪತ್ರ ಹಿಂತೆಗೆದುಕೊಳ್ಳುವ ದಿನಾಂಕವನ್ನು ನಿಗದಿ ಪಡಿಸುವುದು ಮತ್ತು ಹೀಗೆ ನಿಗದಿಪಡಿಸಿದ ದಿನಾಂಕಗಳ ನಡುವೆ ಅಗತ್ಯ ಕಾಲಾವಕಾಶ ಇರುವಂತೆ ನೋಡಿಕೊಳ್ಳುವುದು.

13) ಹೀಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡುವವರೆಗೂ ಚುನಾವಣಾ ಅಧಿಕಾರಿಯು ಕರ್ತವ್ಯ ನಿರ್ವಹಿಸುವುದು ಮತ್ತು ಇದರ ಬಗ್ಗೆ ಮಹಾಸಭೆಯಲ್ಲಿ ಫಲಿತಾಂಶ ಘೋಷಿಸುವುದು ಸಹ ಚುನಾವಣಾಧಿಕಾರಿಯ ಕರ್ತವ್ಯವಾಗಿರತಕ್ಕದ್ದು.

14) ಅವಿರೋದವಾಗಿ ಆಯ್ಕೆಯಾದ ಪದಾಧಿಕಾರಿಗಳ ಹುದ್ದೆಗಳನ್ನು ಹೊರತು ಪಡಿಸಿ ಇನ್ನು ಉಳಿದ ಹುದ್ದೆಗಳಿಗೆ ರಹಸ್ಯ ಮತದಾನ ಅಥವಾ ಕೈ ಎತ್ತಿಸುವುದರ ಮೂಲಕ ನಡೆಸತಕ್ಕದ್ದು. ಅಂದರೆ ಚುನಾವಣೆಗಳನ್ನು ಅವಿರೋಧವಾಗಿ ಅಥವಾ ರಹಸ್ಯ ಮತದಾನ ಕೈಎತ್ತುವುದರ ಮೂಲಕ ನಡೆಸುವುದು.

15) ಹೊಸ ಚುನಾವಣೆಗಳು ನಡೆದ ತರುವಾಯ ಹೊಸದಾಗಿ ಚುನಾಯಿತರಾದ ಪದಾಧಿಕಾರಿಗಳಿಗೆ ತಮ್ಮ ತಮ್ಮ ಪದದ ಪ್ರಭಾರವನ್ನು ವಹಿಸಿಕೊಡುವುದು ಪದಾಧಿಕಾರಿಗಳ ಹೊಣೆಗಾರಿಕೆಯಾಗಿರತಕ್ಕದ್ದು.

16) ಚುನಾವಣಾ ಕರ್ತವ್ಯದ ಮೇಲೆ ನೇಮಕಗೊಂಡ ಚುನಾವಣಾ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳಿಗೆ ಕಾರ್ಯಕಾರಿ ಸಮಿತಿಯು ಅಗತ್ಯ ಸಂಭಾವನೆಯನ್ನು ನಿಗದಿಪಡಿಸಿ ನೀಡುವುದು.

17) ಚುನಾವಣೆ ನಡೆಯುವ ಸ್ಥಳ ಮತ್ತು ಮೇಲಿನ ಚುನಾವಣಾ ವಿಧಾನಗಳು ಸಾದ್ಯವಾದಷ್ಟು ಮಟ್ಟಿಗೆ ಅಂಧ ಸ್ನೇಹಿಯಾಗಿರುವಂತೆ ವ್ಯವಸ್ಥೆಗೊಳಿಸಲು ಕೇಂದ್ರ ಕಾರ್ಯಕಾರಿ ಮಂಡಳಿಯು ಶ್ರಮಿಸುವುದು.

ಪದಾಧಿಕಾರಿಗಳ ಅಧಿಕಾರಗಳು ಮತ್ತು ಕರ್ತವ್ಯಗಳು

a) ಅಧ್ಯಕ್ಷರ ಅಧಿಕಾರಗಳು ಮತ್ತು ಕರ್ತವ್ಯಗಳು

1) ಅಧ್ಯಕ್ಷರು ಸಂಘದ ವ್ಯವಹಾರಗಳ ಕಾರ್ಯನಿರ್ವಹಣೆ ಮತ್ತು ಆಡಳಿತದ ಮೇಲೆ ಸಮಗ್ರ ನಿಯಂತ್ರಣವನ್ನು ಹೊಂದಿರತಕ್ಕದ್ದು.

2) ಇವರು ಸಂಘದ ವ್ಯವಹಾರಗಳನ್ನು ನಡೆಸಲು ಅವಶ್ಯಕವಾಗಬಹುದಾದಷ್ಟು ಉಪ ಸಮಿತಿಗಳನ್ನು ರಚಿಸಬಹುದು ಹಾಗೂ ಅಂತಹ ಉಪ-ಸಮಿತಿಗಳ ನೇಮಕದ ವಿಷಯವನ್ನು ಕೇಂದ್ರ ಸಮಿತಿಯ ಅನುಸಮರ್ಥನೆಗಾಗಿ ಅದರ ಮುಂದೆ ಮಂಡಿಸತಕ್ಕದ್ದು.

3) ಇವರು ರಾಜ್ಯ ಪರಿಷತ್, ಕೇಂದ್ರ ಕಾರ್ಯಕಾರಿ ಸಮಿತಿ ಮತ್ತು ಜಂಟಿ ಸಮಲೋಚಕ ಪರಿಷತ್ತಿನ ಅಥವಾ ಕೇಂದ್ರ ಕಾರ್ಯಕಾರಿ ಸಮಿತಿ ಸೇರಿದಂತೆ ಎಲ್ಲಾ ಸಭೆಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತಕ್ಕದ್ದು.

4) ತುರ್ತು ಸಂದರ್ಭವಿದ್ದು ಸಮಾಲೋಚಿಸಲು ಸಮಯವಿಲ್ಲದಿದ್ದ ಸಂದರ್ಭದಲ್ಲಿ ಆ ಸನ್ನಿವೇಶಕ್ಕೆ ಅಗತ್ಯವಾದ ಕ್ರಮಗಳನ್ನು ಅಧ್ಯಕ್ಷರು ಅಂಗೀಕರಿಸಬಹುದು ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿಯ ಮುಂದಿನ ಸಭೆಯಲ್ಲಿ ಅಂತಹ ಕ್ರಮದ ಬಗ್ಗೆ ಅನುಸಮರ್ಥನೆ ಪಡೆದುಕೊಳ್ಳಬಹುದು.

5) ಇವರು ಉಪಸಮಿತಿಗಳ ಕಾರ್ಯನಿರ್ವಹಣೆಯ ಬಗ್ಗೆ ಗಮನಕೊಡತಕ್ಕದ್ದು ಮತ್ತು ಕಾಲಕಾಲಕ್ಕೆ ಅವಶ್ಯಕವಾಗಬಹುದಾದಂತಹ ನಿರ್ದೇಶನಗಳನ್ನು ಅವುಗಳಿಗೆ ನೀಡತಕ್ಕದ್ದು. ಇವರು ಸದಸ್ಯರ ಹಿತಾಸಕ್ತಿಯನ್ನು ಉತ್ತೇಜಿಸುವುದು ಅವಶ್ಯಕವಾಗಿರುವುದರಿಂದ ಸಂಘದ ವಿಭಾಗೀಯ ಶಾಖೆಗಳಿಗೆ ಭೇಟಿ ನೀಡತಕ್ಕದ್ದು ಹಾಗೂ ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಸಂಘದ ವಿಭಾಗೀಯ ಶಾಖೆಗಳು ಕಾರ್ಯನಿರ್ವಹಣೆಯನ್ನು ಹಾಗೂ ಸಂಘದ ಅಂತಹ ವಿಭಾಗಿ ಶಾಖೆಗಳ ಕಾರ್ಯನಿರ್ವಣೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡುವುದಕ್ಕಾಗಿ ಪದಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಕಾರ್ಯಕಾರಿ ಸಮಿತಿಗಳಿಗೆ ಸೂಕ್ತ ಕ್ರಮಗಳನ್ನು ಸೂಚಿಸತಕ್ಕದ್ದು.

6) ಅಧ್ಯಕ್ಷರ ಅಧಿಕಾರ ಅವಧಿ 3 ವರ್ಷಗಳಾಗಿರತಕ್ಕದ್ದು

7) ಅಧ್ಯಕ್ಷರು ತುರ್ತು ಸಂದರ್ಭಗಳಲ್ಲಿ ಸಭೆಗಳನ್ನು ಮುಂದೂಡಲು ಅಸಾಧಾರಣ ಅಧಿಕಾರಗಳನ್ನು ಹೊಂದಿರತಕ್ಕದ್ದು.

b) ಉಪಾಧ್ಯಕ್ಷರ ಅಧಿಕಾರಗಳು ಮತ್ತು ಕರ್ತವ್ಯಗಳು

ಅಧ್ಯಕ್ಷರ ಗೈರು ಹಾಜರಿಯ ಅವಧಿಯಲ್ಲಿ ಇರುವ ಇಬ್ಬರು ಉಪಾಧ್ಯಕ್ಷರ ಪೈಕಿ ವಯಸ್ಸಿನಲ್ಲಿ ಹಿರಿಯರಾದ ಉಪಾಧ್ಯಕ್ಷರು ಒಬ್ಬರು ಅಧ್ಯಕ್ಷರ ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಹಾಗೂ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

c) ಪ್ರಧಾನ ಕಾರ್ಯದರ್ಶಿಯವರ ಅಧಿಕಾರಗಳು ಮತ್ತು ಕರ್ತವ್ಯಗಳು:

1) ಪ್ರಧಾನ ಕಾರ್ಯದರ್ಶಿಯವರು ಸಂಘದ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿರತಕ್ಕದ್ದು ಇವರು ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಕೇಂದ್ರ ಕಾರ್ಯಕಾರಿಸಮಿತಿ ಉಪಸಮಿತಿಗಳು ಹಾಗೂ ರಾಜ್ಯ ಪರಿಷತ್ತಿನ ಸಭೆಗಳನ್ನು ಕರೆಯತಕ್ಕದ್ದು. ಇವರು ಸಂಘದ ಸಾಮಾನ್ಯ ಪತ್ರ ವ್ಯವಹಾರವನ್ನು ನೋಡಿಕೊಳ್ಳತಕ್ಕದ್ದು. ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಮತ್ತು ಕೇಂದ್ರ ಕಾರ್ಯಕಾರಿ ಸಮಿತಿಯ ಅಂತಹ ಸಭೆಗಳು ಹಾಗೂ ಅಂತಹ ಉಪ-ಸಮಿತಿಗಳು ಹಾಗೂ ರಾಜ್ಯ ಪರಿಷತ್ತಿನ ಅಂತಹ ಸಭೆಗಳ ನಡವಳಿ ಪುಸ್ತಕಗಳನ್ನು ಇಟ್ಟುಕೊಂಡಿರತಕ್ಕದ್ದು. ಇವರು ಕಛೇರಿಯ ಅಧಿಕೃತ ಮೊಹರು ಹಾಗೂ ದ್ವಜದ ಅಭೀರಕ್ಷೆಯನ್ನು ಹೊಂದಿರತಕ್ಕದ್ದು.

2) ಪ್ರಧಾನ ಕಾರ್ಯದರ್ಶಿಯವರು ಹಿಂದಿನ ವರ್ಷಗಳಿಗೆ ಸಂಬಂಧಿಸಿದಂತೆ ಸಂಘದ ಕಾರ್ಯನಿರ್ವಹಣೆಯ ಬಗ್ಗೆ ವಿಭಾಗೀಯ ಶಾಖೆಗಳಿಂದ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಿಂದ ವರದಿಗಳನ್ನು ವಾರ್ಷಿಕ ವರದಿಯಲ್ಲಿ ಅಳವಡಿಸಿಕೊಳ್ಳುವುದಕ್ಕಾಗಿ ಪಡೆದುಕೊಂಡ ನಂತರ ಸಮಿತಿಗಳ ವಾರ್ಷಿಕ ವರದಿಗಳನ್ನು ವರ್ಷದ ಕೊನೆಯಲ್ಲಿ ಸಿದ್ದಪಡಿಸತಕ್ಕದ್ದು. ಕರಡು ವಾರ್ಷಿಕ ವರದಿಯಲ್ಲಿ ಚಟುವಟಿಕೆಗಳಲ್ಲಿ ಆಗಿರುವ ಪ್ರಗತಿ ಸಂಘಟನಾ ಕೆಲಸ ಮತ್ತು ಸಂಘದ ಹಣಕಾಸು ಸ್ಥಿತಿಯನ್ನು ತೋರಿಸತಕ್ಕದ್ದು. ಕರಡನ್ನು ಕೇಂದ್ರ ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸತಕ್ಕದ್ದು.

3) ಪ್ರಧಾನ ಕಾರ್ಯದರ್ಶಿಯವರು ಸಂಘದ ಚಟುವಟಿಕೆಗಳಿಗೆ ಹಾಗೂ ನೌಕರರ ಸೇವಾ ಷರತ್ತುಗಳಿಗೆ ಬಾಧಕವಾಗುವ ಪ್ರಶ್ನೆಗಳ ಬಗ್ಗೆ ಸಲಹೆಯನ್ನು ನೀಡುವುದಕ್ಕೆ ಹಾಗೂ ಪಡೆಯುವುದಕ್ಕೆ ಸಂಬಂಧಿಸಿದಂತೆ ಮತ್ತು ಕೇಂದ್ರ ಕಾರ್ಯಕಾರಿ ಸಮಿತಿಯು ನಿರ್ದೇಶಿಸಬಹುದಾದಂತಹ ಪ್ರಕರಣಗಳಲ್ಲಿ ಅಪೀಲುಗಳು ಹಾಗೂ ಜ್ಞಾಪನಾ ಪತ್ರಗಳನ್ನು ಸಿದ್ದಪಡಿಸಲು ವಿಭಾಗೀಯ ಶಾಖೆಗಳು ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಇತರೆ ಸಂಯೋಜಿತ ಸೇವಾ ಸಂಘಗಳೊಂದಿಗೆ ಸ್ವತಃ ನಿಕಟ ಸಂಪರ್ಕದಲ್ಲಿರತಕ್ಕದ್ದು.

4) ತಕ್ಷಣ ಕ್ರಮಕೈಗೊಳ್ಳುವ ಅಗತ್ಯವಿರುವ ತುರ್ತು ಸಂದರ್ಭದಲ್ಲಿ ಅವರು ಸಂಘದ ಮೂಲ ಆಶಯಕ್ಕೆ ಬಾದಕವಾಗಬಹುದಾದಂತಹ ವಿಷಯಗಳ ಬಗ್ಗೆ ಅವಶ್ಯಕವಾಗಬಹುದಾದಂಥ ಕ್ರಮಗಳನ್ನು ತೆಗೆದುಕೊಳ್ಳಬಹುದು ಹಾಗೂ ತಮ್ಮ ಕ್ರಮದ ಬಗ್ಗೆ ಅಧ್ಯಕ್ಷರಿಗೆ ವರದಿ ಮಾಡತಕ್ಕದ್ದು.

5) ಅವರು ವಿಭಾಗೀಯ ಶಾಖೆಗಳಿಗೆ ಭೇಟಿ ನೀಡಬಹುದು ಹಾಗೂ ಅವರು ಬೇಟಿ ನೀಡಿದ ಅಂತಹ ಶಾಖೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬಹುದು ಮತ್ತು ಅವರ ಭೇಟಿಯ ಸಮಯದಲ್ಲಿ ಅವರು ಗಮನಿಸಿದ ಗಂಭೀರ ಅಕ್ರಮಗಳ ಎಲ್ಲಾ ಪ್ರಕರಣಗಳ ಬಗ್ಗೆ ಕೇಂದ್ರ ಕಾರ್ಯಕಾರಿ ಸಮಿತಿಗೆ ವಿಶೇಷ ವರದಿಗಳನ್ನು ಸಹ ಸಲ್ಲಿಸತಕ್ಕದ್ದು. ಅಂತಹ ವಿಭಾಗೀಯ ಶಾಖೆಗಳ ಆಡಳಿತಕ್ಕೆ ಸಂಬಂಧಿಸಿದಂತೆ ಅವರು ಭೇಟಿ ನೀಡಿದ ಶಾಖೆಗಳಿಗೆ ಅವಶ್ಯಕ ನಿರ್ದೇಶನಗಳನ್ನು ಹಾಗೂ ಸೂಚನೆಗಳನ್ನು ನೀಡತಕ್ಕದ್ದು.

6) ಪ್ರಧಾನ ಕಾರ್ಯದರ್ಶಿಯವರು ಸ್ವೀಕರಿಸಿದ ಎಲ್ಲಾ ನಿರ್ಣಯ ಠರಾವುಗಳನ್ನು ಅಥವಾ ತಾನಾಗಿಯೇ ಅಥವಾ ಚರ್ಚೆಗಾಗಿ ಶಾಖಾ ಸಂಘಗಳು ಪ್ರಸ್ತಾಪಿಸಿದ ವಿಷಯಗಳನ್ನು ಕೇಂದ್ರ ಕಾರ್ಯಕಾರಿ ಸಮಿತಿಯ ಮುಂದಿಡತಕ್ಕದ್ದು ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿಯು ಕೈಗೊಂಡ ನಿರ್ಣಯದ ಪ್ರಕಾರ ಕಾರ್ಯನಿರ್ವಹಿಸತಕ್ಕದ್ದು.

7) ಅವರು ಸಂದಾಯಕ್ಕಾಗಿ ಬಿಲ್ಲುಗಳನ್ನು ಪಾಸು ಮಾಡುವ ಮೊದಲು ಎಲ್ಲಾ ಬಿಲ್ಲುಗಳನ್ನು ಪರಿಶೀಲಿಸತಕ್ಕದ್ದು ಮತ್ತು 2000 ರೂಪಾಯಿಗಳಿಗೆ ಮೀರಿದ ಮೊತ್ತದ ಬಿಲ್ಲುಗಳನ್ನು ಸಂದಾಯಕ್ಕಾಗಿ ಅಧ್ಯಕ್ಷರ ಅನುಮೋದನೆಯನ್ನು ಪಡೆಯತಕ್ಕದ್ದು.

8) ಅವರು ಅಧ್ಯಕ್ಷರು ಅಥವಾ ಕೇಂದ್ರ ಕಾರ್ಯಕಾರಿ ಸಮಿತಿ ಅಥವಾ ರಾಜ್ಯ ಪರಿಷತ್ತು ಸಂಘದ ಉದ್ದೇಶಗಳಿಗೆ ಸುಸಂಗೀತವಾದ ಹಾಗೂ ಕಾಲಕಾಲಕ್ಕೆ ವಹಿಸಬಹುದಾದಂತಹ ಇತರೆ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

9) ಅವರು ಸಂಘದ ಹಿತಾಸಕ್ತಿಗಾಗಿ ಅಗತ್ಯವಾದ ಕೆಲವು ಕಾರ್ಯಗಳನ್ನು ಮಾಡುವುದಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿ ಹಾಗೂ ಸಂಘಟನಾ ಕಾರ್ಯದರ್ಶಿಗಳಿಗೆ ಸಲಹೆ ನೀಡಬಹುದು ಮತ್ತು ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ವಿಭಾಗೀಯ ಮತ್ತು ಮಹಿಳಾ ನಿರ್ದೇಶಕರು ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಮೇಲ್ವಿಚಾರಣೆಯನ್ನು ಮಾಡತಕ್ಕದ್ದು.

d) ಕಾರ್ಯದರ್ಶಿಯ ಅಧಿಕಾರಗಳು ಮತ್ತು ಕರ್ತವ್ಯಗಳು:

1) ರಾಜ್ಯ ಸಂಘದ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಯವರು ತಮ್ಮ ಕರ್ತವ್ಯಗಳು ಹಾಗೂ ಹೊಣೆಗಾರಿಕೆಗಳನ್ನು ನಿರ್ವಹಿಸುವಾಗ ನೆರವು ನೀಡತಕ್ಕದ್ದು.

2) ಪ್ರಧಾನ ಕಾರ್ಯದರ್ಶಿಯವರು ಪ್ರವಾಸದಲ್ಲಿರುವಾಗಲೆಲ್ಲಾ ಅಥವಾ ಅನ್ಯತಾ ಸಂಘದಲ್ಲಿ ಗೈರು ಹಾಜರಾದಗಲೆಲ್ಲಾ ಅಥವಾ ತಾತ್ಕಲಿಕವಾಗಿ ಅವರ ಹುದ್ದೆ ಖಾಲಿ ಇದ್ದಲ್ಲಿ ಕಾರ್ಯದರ್ಶಿಯು ಪ್ರಧಾನ ಕಾರ್ಯದರ್ಶಿಯ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

e) ಸಂಘಟನಾ ಕಾರ್ಯದರ್ಶಿಗಳು:

1) ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿಗಳು ರಾಜ್ಯದಾದ್ಯಂತ ಸಂಘದ ಕಾರ್ಯಕ್ರಮಗಳು ಮತ್ತು ಇತರೆ ಚಟುವಟಿಕೆಗಳ ನಿರ್ವಹಣಾ ಪ್ರಭಾರದಲ್ಲಿರತಕ್ಕದ್ದು. ಅವರು ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಅವರಿಬ್ಬರೊಂದಿಗೆ ಸಮಲೋಚಿಸಿ ಸಂಘದ ಹಿತಾಸಕ್ತಿಯ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಅಥವಾ ಚಟುವಟಿಕೆಗಳನ್ನು ಸಂಘಟಿಸತಕ್ಕದ್ದು. ಅವರು ಕೇಂದ್ರ ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸಬೇಕಾದ ಸಂಘದ ಚಟುವಟಿಕೆಗಳ ಬಗ್ಗೆ ಕಾಲಕಾಲಕ್ಕೆ ಅಧ್ಯಕ್ಷರಿಗಾಗಲೀ ಅಥವಾ ಪ್ರಧಾನ ಕಾರ್ಯದರ್ಶಿಯವರಿಗಾಗಲೀ ವರದಿಯನ್ನು ಸಲ್ಲಿಸುತ್ತಿರತಕ್ಕದ್ದು ಹಾಗೂ ಅವಶ್ಯಕತೆ ಇರುವಾಗಲೆಲ್ಲಾ ಅಧ್ಯಕ್ಷರ ಅಥವಾ ಪ್ರಧಾನ ಕಾರ್ಯದರ್ಶಿಯೊಂದಿಗೆ ಸಮಾಲೋಚಿಸಿ ಪ್ರವಾಸವನ್ನು  ಕೈಗೊಳ್ಳತಕ್ಕದ್ದು.

2) ಅವರು ಸಂಘದ ಕಾರ್ಯಕ್ರಮಗಳ ಹಾಗೂ ಚಟುವಟಿಕೆಗಳು ಯಶಸ್ವಿ ಅನುಷ್ಠಾನಕ್ಕಾಗಿ ವಿಭಾಗೀಯ ನಿರ್ದೇಶಕರುಗಳು ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸತಕ್ಕದ್ದು.

f) ಖಜಾಂಚಿಯ ಅಧಿಕಾರಗಳು ಮತ್ತು ಕರ್ತವ್ಯಗಳು:

1) ಖಜಾಂಚಿಯು ಸಂಘದ ಸದಸ್ಯರು ಸಂದಾಯ ಮಾಡತಕ್ಕ ಮತ್ತು ಸಂಘದ ಕಟ್ಟಡಗಳ ಸಂಬಂಧದಲ್ಲಿ ಸಂದಾಯ ಮಾಡತಕ್ಕ ಎಲ್ಲಾ ಹಣವನ್ನು ಒಳಗೊಂಡಂತೆ ಸಂಘಕ್ಕೆ ಸಂದಾಯವಾಗತಕ್ಕ ಎಲ್ಲ ಹಣವನ್ನು ಸ್ವೀಕರಿಸತಕ್ಕದ್ದು ಮತ್ತು ಇವರ ಸ್ವೀಕರಿಸಿದಂತಹ ಹಣಕ್ಕೆ ರಸೀದಿಗಳನ್ನು ನೀಡತಕ್ಕದ್ದು ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿಯು ಅನುಮೋದಿಸಿದ ಬಾಂಕಿನಲ್ಲಿ ಸದರಿ ಹಣವನ್ನು ಠೇವಣಿ ಇಡತಕ್ಕದ್ದು.

2) ಪ್ರಧಾನ ಕಾರ್ಯದರ್ಶಿಯವರು ಸಂದಾಯಕ್ಕಾಗಿ ವಿದ್ಯುಕ್ತವಾಗಿ ಪಾಸು ಮಾಡಿದ ಮೊತ್ತವು 2000 ರೂಪಾಯಿಗಳನ್ನು ಮೀರಿದ್ದಲ್ಲಿ ಅಧ್ಯಕ್ಷರು ಪಾಸು ಮಾಡತಕ್ಕ ಸೂಕ್ತವಾದ ವೋಚರುಗಳನ್ನು ಪಡೆದ ನಂತರ ಸಂಘದ ಪರವಾಗಿ ಎಲ್ಲಾ ಸಂದಾಯಗಳನ್ನು ಮಾಡತಕ್ಕದ್ದು ಹಾಗೂ ಇವರು ಸಂಘದ ಎಲ್ಲಾ ಬೆಲೆಯುಳ್ಳ ಭದ್ರತೆಗಳ ಅಭಿರಕ್ಷೆಯನ್ನು ಹೊಂದಿರತಕ್ಕದ್ದು.

3) ಅವರು ಸಾಮಾನ್ಯ ನಗದು ಪುಸ್ತಕ ಸಾಮಾನ್ಯ ಲೆಡ್ಜರ್ ಮತ್ತು ಸದಸ್ಯತ್ವದ ರಿಜಿಸ್ಟರ್ ಹಣದ ಮೌಲ್ಯದ ನಮೂನೆಯ ಸ್ಟಾಕ್ ಪುಸ್ತಕಗಳನ್ನು ನಿರ್ವಹಿಸತಕ್ಕದ್ದು. ಇವರು ಮಾಸಿಕ ಸ್ವೀಕೃತಿಗಳು ಹಾಗೂ ಸಂದಾಯಗಳ ವಿವರ ಪಟ್ಟಿಗಳನ್ನು ಸಿದ್ದಪಡಿಸಿ ಅನುಮೋದನೆಗಾಗಿ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಮಂಡಿಸತಕ್ಕದ್ದು. ಅವರು ವಿದ್ಯುಕ್ತವಾಗಿ ಲೆಕ್ಕಪರಿಶೋಧಿಸಲಾದ ಹಿಂದಿನ ವರ್ಷದ ಲೆಕ್ಕ ಪತ್ರಗಳ ವಾರ್ಷಿಕ ವಿವರಪಟ್ಟಿಯನ್ನು ಪ್ರತಿ ವರ್ಷದ ಮುಕ್ತಾಯದಲ್ಲಿ ಸಿದ್ದಪಡಿಸತಕ್ಕದ್ದು. ಲೆಕ್ಕಪತ್ರಗಳನ್ನು ವಾರ್ಷಿಕ ವರದಿಯಲ್ಲಿ ಅಳವಡಿಸಿಕೊಳ್ಳುವುದಕ್ಕೆ ಮೊದಲು ಕೇಂದ್ರ ಕಾರ್ಯಕಾರಿ ಸಮಿತಿಯಿಂದ ಇದಕ್ಕೆ ಅನುಮೋದನೆಯನ್ನು ಪಡೆದುಕೊಳ್ಳತಕ್ಕದ್ದು.

4) ಖಜಾಂಚಿಯು ಪಿಠೋಪಕರಣಗಳು ದಾಸ್ತಾನುಗಳು ಮುಂತಾದ ಬೆಲೆ ಬಾಳುವ ಆಸ್ತಿಗಳ ದಸ್ತಾನು ರಿಜಿಸ್ಟರನ್ನು ಮತ್ತು ರಸೀದಿ ಪುಸ್ತಕಗಳನ್ನು ನಿರ್ವಹಿಸತಕ್ಕದ್ದು ಹಾಗೂ ನೀಡಲಾಗಿದ್ದ ರಶೀದಿ ಪುಸ್ತಕಗಳ ಸಂಗ್ರಹಿಸಿದ ಮೊಬಲಗಿನ ಲೆಕ್ಕವನ್ನು ಸಲ್ಲಿಸತಕ್ಕದ್ದು ಹಾಗೂ ತಾನು ರಸೀದಿ ಪುಸ್ತಕವನ್ನು ಸ್ವೀಕರಿಸಿದ್ದ ಬಗ್ಗೆ ಯಾವುದೇ ಕಾರಣಗಳಿದ್ದಲ್ಲಿ ಅವುಗಳನ್ನು ತಿಳಿಸತಕ್ಕದ್ದು. ಅವರು ದಾಸ್ತಾನುಗಳ ಪೀಠೋಪಕರಣಗಳ ಮತ್ತು ಇತರೆ ಬೆಲೆಯುಳ್ಳ ಆಸ್ತಿಗಳು ಮುಂತಾದವುಳ ದಾಸ್ತಾನು ರಿಜಿಸ್ಟರನ್ನು ಆಂತರಿಕ ಲೆಕ್ಕ ಪರಿಶೋಧಕರ ಮುಂದೆ ಭೌತಿಕ ಸತ್ಯಾಪನೆಗಾಗಿ ಹಾಜರುಪಡಿಸತಕ್ಕದ್ದು. ಅವರು ವರ್ಷಕ್ಕೊಮ್ಮೆ ಸತ್ಯಾಪನೆಯ ಪ್ರಮಾಣ ಪತ್ರವನ್ನು ದಾಖಲು ಮಾಡತಕ್ಕದ್ದು.

5) ಖಜಾಂಚಿಯು ಪಾಸು ಪುಸ್ತಕಗಳ, ಚೆಕ್ ಪುಸ್ತಕಗಳ ಹಾಗೂ ಸಂಘದ ನಿಧಿಗಳ ಅಭಿರಕ್ಷಕರಾಗಿರತಕ್ಕದ್ದು ಮತ್ತು ಅವರು ಪ್ರಧಾನ ಕಾರ್ಯದರ್ಶಿಯೊಂದಿಗೆ ಜಂಟಿಯಾಗಿ ಬ್ಯಾಂಕ್ ಲೆಕ್ಕ ಖಾತೆಯನ್ನು ನಿರ್ವಹಿಸತಕ್ಕದ್ದು. ಈ ಕಾರ್ಯ ವಿಧಾನದ ಯಾವುದೇ ಬದಲಾವಣೆಯು ಕೇಂದ್ರ ಕಾರ್ಯಕಾರಿ ಸಮಿತಿಯ ನಿರ್ದಿಷ್ಟ ಅನುಮೋದನೆಯನ್ನು ಆಧರಿಸಿರತಕ್ಕದ್ದು.

6) ಖಜಾಂಚಿಯು ತುರ್ತು ಸಾದಿಲ್ವಾರು ವೆಚ್ಚಗಳು ಭರಿಸಲು 1000/- ರೂಪಾಯಿಗಳ (ಒಂದು ಸಾವಿರ ರೂಪಾಯಿಗಳು ಮಾತ್ರ) ಖಾಯಂ ಕೈ ಹಣವನ್ನು ಇಟ್ಟುಕೊಂಡಿರುವುದಕ್ಕೆ ಅನುಮತಿಸಿರತಕ್ಕದ್ದು. ಅವರು ಈ ಮೊಬಲಗನ್ನು ಅವಶ್ಯಕತೆ ಇರುವಾಗಲೆಲ್ಲಾ ಭರ್ತಿ ಮಾಡಿಕೊಳ್ಳತಕ್ಕದ್ದು. 1000 ರೂಪಾಯಿಗಳನ್ನು (ಒಂದು ಸಾವಿರ ರೂಪಾಯಿಗಳು ಮಾತ್ರ) ಮೀರಿದ ವೆಚ್ಚದ ಯಾವುದೇ ಬಾಬ್ತಿಗೆ ಅಧ್ಯಕ್ಷರ ಅನುಸಮರ್ಥನೆಯ ಅವಶ್ಯಕತೆಯಿರುತ್ತದೆ.

g) ವಿಭಾಗೀಯ ನಿರ್ದೇಶಕರುಗಳ ಅಧಿಕಾರಗಳು ಮತ್ತು ಕರ್ತವ್ಯಗಳು:

1) ವಿಭಾಗೀಯ ನಿರ್ದೇಶಕರು ತಮ್ಮ ಕರ್ತವ್ಯ ವ್ಯಾಪ್ತಿಯ ಶಾಖೆಗಳಲ್ಲಿ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸತಕ್ಕದ್ದು.

2) ಅವರು ವಿಭಾಗದೊಳಗಿರುವ ಜಿಲ್ಲೆಗಳ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳೊಡನೆ ಸಮಾಲೋಚಿಸಿ ವಿಭಾಗೀಯ ಮಟ್ಟದಲ್ಲಿ ಸಭೆಗಳನ್ನು ವ್ಯವಸ್ಥೆ ಮಾಡತಕ್ಕದ್ದು.

3) ಅವರು ವಿಭಾಗದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಕಾರ್ಯನಿರ್ವಹಣಾ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿದ ಕೂಡಲೆ ಸಂಬಂಧಪಟ್ಟ ಶಾಖೆಗಳ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಿಗೆ ಅವಶ್ಯಕ ಕ್ರಮಕ್ಕಾಗಿ ಪ್ರತಿಗಳನ್ನು ನೀಡತಕ್ಕದ್ದು.

4) ಅವರು ತಮ್ಮ ತಮ್ಮ ವಿಭಾಗದೊಳಗಿರುವ ಶಾಖೆಗಳ ಕಾರ್ಯದರ್ಶಿಗಳ ಅಥವಾ ಸಂಘಟನಾ ಕಾರ್ಯದರ್ಶಿಗಳ ಜಿಲ್ಲಾ ಅಥವಾ ವಿಭಾಗೀಯ ಮಟ್ಟದ ಸಭೆಗಳನ್ನು ನಡೆಸಬಹುದು ಮತ್ತು ಶಾಖೆಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವುದಕ್ಕಾಗಿ ಅವಶ್ಯಕವಾಗಬಹುದಾದ ಕ್ರಮಗಳನ್ನು ಕೈಗೊಳ್ಳಬಹುದು.

5) ಅವರು ತಮ್ಮ ವ್ಯಾಪ್ತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿಕೊಂಡು ಅಂಧ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ಸ್ಥಳೀಯವಾಗಿ ಪರಿಹಾರಗಳನ್ನು ಕಂಡುಕೊಳ್ಳುವುದು.

h) ಮಹಿಳಾ ನಿರ್ದೇಶಕರು:

ಮಹಿಳೆಯರ ಪ್ರತಿನಿಧಿಯಾಗಿರುವ ಮಹಿಳಾ ನಿರ್ದೇಶಕರು ರಾಜ್ಯದ ಎಲ್ಲಾ ಸರ್ಕಾರಿ ಅಂಧ ಮಹಿಳಾ ನೌಕರರ ಪರವಾಗಿ ಸಂಘಟನಾತ್ಮಕ ಚಟುವಟಿಕೆಗಳನ್ನು ಹಾಗೂ ಮಹಿಳೆಯರ ಸರ್ವತೋಮುಖ ಬೆಳೆವಣಿಗೆಗೆ ಸಂಘಟನೆಯ ನಿಯಮದನುಸಾರ ಶ್ರಮಿಸುವುದು.

ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಅಧಿಕಾರಗಳು ಮತ್ತು ಕರ್ತವ್ಯಗಳು

1) ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ತಮ್ಮ ಜಿಲ್ಲೆಯ ವ್ಯಾಪ್ತಿಯೊಳಗೆ ಇರುವ ಅಂಧ ನೌಕರರ ಸದಸ್ಯತ್ವವನ್ನು ಪಡೆಯಲು ಉತ್ತೇಜಿಸುವುದು.

2) ಹೊಸದಾಗಿ ನೌಕರಿಗೆ ಸೇರಿದ ಅಂಧ ನೌಕರರಿಗೆ ಸಂಘಟನೆಯ ಬಗ್ಗೆ ಅರಿವು ಮೂಡಿಸುವುದು.

3) ತಮ್ಮ ಜಿಲ್ಲಾ ವ್ಯಾಪ್ತಿಯ ವಿವಿಧ ಇಲಾಖೆಗಳಲ್ಲಿನ ಅಂಧ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ವಿಭಾಗೀಯ ನಿರ್ದೇಶಕರು ಮತ್ತು ಕಾರ್ಯಕಾರಿ ಸಮಿತಿಗೆ ವರದಿ ಮಾಡುವುದು.

4) ವಾರ್ಷಿಕ ಸಭೆಗಳು/ ಚುನಾವಣೆಗಳು ವಿಶೇಷ ಸಮ್ಮೇಳನಗಳಿಗೆ ತಮ್ಮ ವ್ಯಾಪ್ತಿಯ ನೌಕರರುಗಳನ್ನು ಸಂಘಟಿಸುವುದು.

5) ಕೇಂದ್ರ ಕಾರ್ಯಕಾರಿ ಸಮಿತಿಯ ಅಡಳಿತ ವ್ಯವಸ್ಥೆಗೆ ಪೂರಕವಾಗಿ ಸಹಕರಿಸುವುದು ಮತ್ತು ಸದಸ್ಯತ್ವ ಶುಲ್ಕ ಮತ್ತು ನವೀಕರಣದ ಶುಲ್ಕಗಳು ಸೇರಿದಂತೆ ಇತ್ಯಾದಿ ವಂತಿಗೆ ಮತ್ತು ಶುಲ್ಕಗಳನ್ನು ಸಂಗ್ರಹಿಸುವಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿಗೆ ನೆರವಾಗುವುದು ಪ್ರಮುಖ ಕರ್ತವ್ಯಗಳಾಗಿರುತ್ತವೆ.

ಆಂತರಿಕ ಲೆಕ್ಕ ಪರಿಶೋಧಕರ ಕರ್ತವ್ಯಗಳು

1) ಸಂಘದ ಆಂತರಿಕ ಲೆಕ್ಕ ಪರಿಶೋಧಕರು, ನೋಂದಣಿ, ಅಧಿನಿಯಮ ಮತ್ತು ಸಂಘದ ಉಪವಿಧಿಗಳ ನಿಬಂಧನೆಗಳ ಪ್ರಕಾರ ಸಂಘದ ಹಣಕಾಸು ಹಾಗೂ ಸ್ವತ್ತುಗಳಿಗೆ ಕಾವಲುಗಾರರಾಗಿ ಸಂರಕ್ಷಿಸತಕ್ಕದ್ದು.

2)  ಅವರು ನೋಂದಣಿ ಅಧಿನಿಯಮ ಮತ್ತು ಸಂಘದ ಉಪನಿಧಿಗಳ ಪ್ರಕಾರ ಲೆಕ್ಕಪತ್ರಗಳನ್ನು ಮತ್ತು ಲೆಡ್ಜರ್‍ಗಳನ್ನು ಹಾಗೂ ರಸೀದಿ ಪುಸ್ತಕಗಳು, ದಾಸ್ತಾನು ಪುಸ್ತಕಗಳು, ದಸ್ತಾನುಗಳ ಸಾಧನ ಸಲಕರಣೆಗಳ ಮತ್ತು ಯಂತ್ರ ಸ್ಥಾವರಗಳ ರಿಜಿಸ್ಟರುಗಳಂತಹ ಹಣಕ್ಕೆ ಸಂಬಂಧಿಸಿದ ನಮೂನೆ ಪುಸ್ತಕಗಳನ್ನು ಇಟ್ಟುಕೊಂಡು ಬರುವ ಬಗೆಗೆ ಸಂಘದ ಅಧ್ಯಕ್ಷರಿಗೆ ಮತ್ತು ಖಜಾಂಚಿಗಳಿಗೆ ಮಾರ್ಗದರ್ಶನ ನೀಡತಕ್ಕದ್ದು.

ನಿಧಿಗಳು

ಸಂಘದ ನಿಧಿಗಳು ಈ ಮುಂದಿನವುಗಳನ್ನು ಒಳಗೊಂಡಿರತಕ್ಕದ್ದು:

a) ಸದಸ್ಯರಿಂದ ಸಂಗ್ರಹಿಸಿದ ಚಂದಾ ಹಣ.

b) ಸಂಯೋಜಿತ ಸೇವಾ ಸಂಘಗಳಿಂದ ಸ್ವೀಕರಿಸಿದ ವಾರ್ಷಿಕ ವಂತಿಗೆ.

c) ಸರ್ಕಾರದಿಂದ ಸ್ವೀಕರಿಸಿದ ಅನುದಾನಗಳು ಯಾವುದಾದರೂ ಇದ್ದಲ್ಲಿ ಅವುಗಳು.

d) ದೇಣಿಗೆಗಳು ಮುಂತಾದವುಗಳನ್ನು ಸ್ವೀಕರಿಸಿದ್ದಲ್ಲಿ ಅವುಗಳು.

e) ಪ್ರಕಟಣೆಗಳ ಮಾರಾಟದ ಉತ್ಪತ್ತಿ.

f) ಶಾಖೆಗಳಿಗೆ ಧ್ವಜ ಹಾಗೂ ವಿಶೇಷ ಲಾಂಛನದ ಪೂರೈಕೆ ವೆಚ್ಚ.

g) ವಿಪತ್ತು ಪರಿಹಾರ ನಿಧಿ ಸಂಗ್ರಹಣೆಗಳು.

h) ಕಟ್ಟಡ ನಿಧಿ ಉದ್ದೇಶಕ್ಕಾಗಿ ಸರ್ಕಾರದಿಂದ ಸ್ವೀಕರಿಸಿದ ದೇಣಿಗೆಗಳು ಹಾಗೂ ಹೊಂದಾಣಿಕೆ ಅನುದಾನಗಳು ಒಳಗೊಂಡ ಕಟ್ಟಡ ನಿಧಿ ಸಂಗ್ರಹಣೆಗಳು.

i) ಸಂಘವು ಸಂಗ್ರಹಿಸಬಹುದಾದ ಹಾಗೂ ಸ್ವೀಕರಿಸಬಹುದಾದ ಇತರೆ ಹಣ.

j) ಮನೋರಂಜನಾ ಕ್ಲಬ್ ನಿಂದ ಸ್ಪೀಕರಿಸಿದ ನಿಧಿಗಳು.

ಮೇಲಿನ (a) (b) (c) (d) (f) ಮತ್ತು (i) ಬಾಬ್ತುಗಳ ಸಂಬಂಧದಲ್ಲಿನ ಲೆಕ್ಕಪತ್ರಗಳನ್ನು ಸಾಮಾನ್ಯ ಲೆಕ್ಕ ಖಾತೆಯಲ್ಲಿ ಠೇವಣಿ ಇಡತಕ್ಕದ್ದು. ಮೇಲಿನ (e) (g) ಮತ್ತು (h) ನಲ್ಲಿ ನಮೂದಿಸಿದ ಪ್ರತಿ ಬಾಬ್ತುವಿಗೆ ಪ್ರತ್ಯೇಕ ಲೆಕ್ಕಗಳನ್ನು ನಿರ್ವಹಿಸತಕ್ಕದ್ದು.

ಸಂಘದ ನಿಧಿಗಳನ್ನು ರಾಜ್ಯ ಕಾರ್ಯಕಾರಿ ಸಮಿತಿ ಅನುಮೋದಿಸಿದ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡತಕ್ಕದ್ದು.

ಸಂಘದ ನಿಧಿಗಳನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳು ಮತ್ತು ಖಜಾಂಚಿಗಳು ಜಂಟಿಯಾಗಿ ಕಾರ್ಯನಿರ್ವಹಿಸತಕ್ಕದ್ದು.

ಪ್ರಯಾಣ ಭತ್ಯೆ

a. ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸಂಘದ ಅಧಿಕೃತ ಕರ್ತವ್ಯಗಳ ಮೇಲೆ ಪ್ರವಾಸವನ್ನು ಕೈಗೊಂಡಿದ್ದರೆ ಅವರಿಗೆ ಅನುಮತಿಸಬಹುದಾದ ದರಗಳಲ್ಲಿ ಸಂಘದ ಕಾರ್ಯಗಳಿಗಾಗಿ ಮಾಡಿದ ಪ್ರಯಾಣಕ್ಕೆ ಸಂದರ್ಭಾನುಸಾರ ರಾಜ್ಯ ಸಂಘದಿಂದ ಪ್ರಯಾಣ ಭತ್ಯೆಯನ್ನು ಸಂದಾಯ ಮಾಡತಕ್ಕದ್ದು.

ಸಮ್ಮೇಳನ

a. ನಿಯತಕಾಲಿಕವಾಗಿ ಸಮ್ಮೇಳನವನ್ನು ವ್ಯವಸ್ಥೆ ಮಾಡಬೇಕು ಮತ್ತು ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಆ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳತಕ್ಕದ್ದು.

b. ಕೇಂದ್ರ ಸಂಘದ ಪದಾಧಿಕಾರಿಗಳು ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಈ ಸಮ್ಮೇಳನಗಳಲ್ಲಿ ಪ್ರತಿನಿಧಿಗಳಾಗಿರತಕ್ಕದ್ದು.

ಲೆಕ್ಕ ಪರಿಶೋಧನೆ

ಸಂಘದ  ಲೆಕ್ಕಪತ್ರಗಳನ್ನು ಪ್ರತಿ ವರ್ಷ ಲೆಕ್ಕ ಪರಿಶೋಧಿಸತಕ್ಕದ್ದು ಮತ್ತು ಈ ಉದ್ದೇಶಕ್ಕಾಗಿ ಕೇಂದ್ರ ಕಾರ್ಯಕಾರಿ ಸಮಿತಿಯು ನೇಮಕ ಮಾಡಿದ ನೋಂದಾಯಿತ ಲೆಕ್ಕಪರಿಶೋಧಕರಿಂದ ಪ್ರಮಾಣೀಕರಿಸತಕ್ಕದ್ದು.

ಕಾನೂನು ವ್ಯವಹರಣೆಗಳು

ಸಂಘವು ಪ್ರಧಾನ ಕಾರ್ಯದರ್ಶಿಯವರ ಹೆಸರಿನಲ್ಲಿ ದಾವೆಯನ್ನು ಹೂಡತಕ್ಕದ್ದು ಮತ್ತು ದಾವೆಗೆ ಗುರಿಯಾಗತಕ್ಕದ್ದು.

ನಷ್ಟ ಭರ್ತಿ

ಕೇಂದ್ರ ಸಂಘದ ಪದಾಧಿಕಾರಿಯು ಸಂಘದ ಅಂತಹ ಸದಸ್ಯನಾಗಿ ಅಥವಾ ಸಂದರ್ಭನುಸಾರ ಪದಾಧಿಕಾರಿಯಾಗಿ ಮಾಡಿದ ಯಾವುದೇ ಕಾರ್ಯ ಅಥವಾ ಮಾಡಿಕೊಂಡ ಯಾವುದೇ ಕರಾರು ಅಥವಾ ಮಾಡಿದ ಅಥವಾ ಮಾಡುವುದಕ್ಕೆ ಆತನು ಅನುಮತಿಸಿದ ಯಾವುದೇ ಕೃತ್ಯದ ಕಾರಣದಿಂದಾಗಿ, ಅಂಥ ಸದಸ್ಯನು ಅಥವಾ ಪದಾಧಿಕಾರಿಯು ವಹಿಸಬಹುದಾದ ಅಥವಾ ವಹಿಸಲು ಬದ್ದನಾದ ಎಲ್ಲಾ ಕಾನೂನುಬದ್ದ ಮತ್ತು ಸೂಕ್ತವಾದ ವೆಚ್ಚಗಳ ಹಾನಿಯನ್ನು ಮತ್ತು ಖರ್ಚುಗಳನ್ನು ಸಂಘವು ನಷ್ಟ ಭರ್ತಿ ಮಾಡಿಕೊಡತಕ್ಕದ್ದು ಮತ್ತು ತನ್ನ ನಿಧಿಗಳಿಂದ ಸಂದಾಯ ಮಾಡುವುದು ಸಂಘದ ಕರ್ತವ್ಯವಾಗಿರತಕ್ಕದ್ದು. ಸಂಘದ ಕರ್ತವ್ಯಗಳನ್ನು ನಿರ್ವಹಿಸುವಾಗ ಮರಣ ಅಥವಾ ಗಾಯ ಉಂಟಾದ ಸಂದರ್ಭದಲ್ಲಿ ಅಂತಹ ಸದಸ್ಯನಿಗೆ ಅದು ನಿರ್ಧರಿಸಬಹದಾದಂತಹ ಪರಿಹಾರವನ್ನು ಸಂದಾಯ ಮಾಡುವುದಕ್ಕೆ ಕೇಂದ್ರ/ ರಾಜ್ಯ ಸಂಘ ಅಧಿಕಾರ ಹೊಂದಿರತಕ್ಕದ್ದು.

ಕಚೇರಿ ಸಿಬ್ಬಂದಿ

ಕೇಂದ್ರ ಕಾರ್ಯಕಾರಿ ಸಮಿತಿಯು ಸಂಘದ ಕಾರ್ಯನಿರ್ವಹಣೆಗಾಗಿ ತಾನು ಸೂಕ್ತವೆಂದು ಬಾವಿಸಬಹುದಾದ ಅಂತಹ ವೇತನ ಶ್ರೇಣಿಯ ಅಥವಾ ಸಂಭಾವನೆಯ ಮೇಲೆ ಅವಶ್ಯವಾಗಬಹುದಾದಷ್ಟು ಸಿಬ್ಬಂದಿಯನ್ನು ಮಂಜೂರು ಮಾಡಬಹುದು ಮತ್ತು ಸಿಬ್ಬಂದಿ ಸದಸ್ಯರನ್ನು ನೇಮಕ ಮಾಡಲು ಅದಕ್ಕೆ ಅಧಿಕಾರವಿರತಕ್ಕದ್ದು. ಸಿಬ್ಬಂದಿ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಹೊಂದಿರತಕ್ಕದ್ದು.

ರಿಜಿಸ್ಟರುಗಳು ಮತ್ತು ದಾಖಲೆಗಳು

ರಾಜ್ಯ ಸಂಘಕ್ಕೆ ಅವಶ್ಯವಾದ ರಿಜಿಸ್ಟರುಗಳು ಮತು ದಾಖಲೆಗಳನ್ನು ನಿಯಮಿಸತಕ್ಕದ್ದು ಮತ್ತು ಅವುಗಳ ಸೂಕ್ತ ಮತ್ತು ಕ್ರಮಬದ್ದ ನಿರ್ವಹಣೆಗೆ ವ್ಯವಸ್ಥೆ ಮಾಡುವುದು ಪ್ರಧಾನ ಕಾರ್ಯದರ್ಶಿಯ ಕರ್ತವ್ಯವಾಗಿರತಕ್ಕದ್ದು. ಕೇಂದ್ರ ಸಂಘವು ವಿಶೇಷ ಉದ್ದೇಶಕ್ಕಾಗಿ ರಸೀದಿ ಪುಸ್ತಕಗಳನ್ನು ಮುದ್ರಿಸತಕ್ಕದ್ದು. ಅದನ್ನು ವಿಭಾಗೀಯ ಶಾಖೆಗಳಿಗೆ ಕೋರಿಕೆ ಪತ್ರದ ಮೇರೆಗೆ ಅವುಗಳನ್ನು ಹಂಚಿಕೆ ಮಾಡತಕ್ಕದ್ದು. ಅಂಥ ರಸೀದಿ ಪುಸ್ತಕಗಳನ್ನು ಸ್ಪೀಕರಿಸಿದವರು ಹೊಣೆಯಾಗಿರತಕ್ಕದ್ದು. ಹಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮತ್ತು ಲೆಕ್ಕ ಪತ್ರಗಳನ್ನು ಹಿಂದಿರುಗಿಸದಿದ್ದ ಯಾವೊಬ್ಬ ವ್ಯಕ್ತಿಯು ಹಣದ ದುರ್ವಿನಿಯೋಗಕ್ಕೆ ಜವಾಬ್ದಾರನಾಗತಕ್ಕದ್ದು ಮತ್ತು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಗುರಿಯಾಗತಕ್ಕದ್ದು.

ಅರ್ಥ ವಿವರಣೆ

ನಿಯಮಗಳ ಬಗ್ಗೆ ಅರ್ಥ ವಿವರಣೆ ನೀಡುವ ಅಧಿಕಾರವು ರಾಜ್ಯ ಸಂಘದಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅದರ ತೀರ್ಮಾನವು ಅಂತಿಮ ಮತ್ತು ನಿರ್ಣಾಯಕವಾಗಿರತಕ್ಕದ್ದು.

ಸಂಘದ ಲಾಂಛನ

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ ಸ್ವಾಭಿಮಾನ, ಸ್ವಗೌರವ ಮತ್ತು ಸಮಾನತೆ ಎಂಬ ವಿಶೇಷ ಲಾಂಛನವು ಸಂಘಕ್ಕೆ ಇರತಕ್ಕದ್ದು  ಮತ್ತು ಹೃದಯದೊಳಗಿನ ತೆರೆದ ಕಣ್ಣಿನ (ಲೊಗೊ) ಚಿಹ್ನೆ ಇರತಕ್ಕದ್ದು.

ಸಂಘಕ್ಕೆ ಧ್ವಜ

ಸಂಘಕ್ಕೆ ತನ್ನದೆ ಆದ ಧ್ವಜವು ಇರತಕ್ಕದ್ದು. ಆ ಧ್ವಜವು ಆಯುತಾಕಾರವಾಗಿದ್ದು ಹಳದಿ ಬಣ್ಣದ ಹಿನ್ನೆಲೆಯಲ್ಲಿ ಕೆಂಪು ಮತ್ತು ನೀಲಿ ಬಣ್ಣದಲ್ಲಿ ಸಂಘದ ಲಾಂಛನವನ್ನು ಹೊಂದಿರತಕ್ಕದ್ದು. ಸಂಘದ ಸಮಾರಂಭದ ಕಾರ್ಯಕ್ರಮಗಳ  ಹಾಗೂ ಸಂಘದ ಸಮ್ಮೇಳನಗಳಲ್ಲಿ ಕೂಡ ಧ್ವಜರೋಹಣ ಮಾಡತಕ್ಕದ್ದು.

ತಿದ್ದುಪಡಿ

ಅವಶ್ಯ ಸಂದರ್ಭಗಳಲ್ಲಿ ಸದರಿ ಸಂಘಟನೆಯ ರಚನೆ ಮತ್ತು ಅಡಳಿತ ನಿಯಮಗಳಿಗೆ ರಾಜ್ಯ ಸಂಘಗಳ ನೋಂದಾಣಿ ಅಧಿನಿಯಮ 1960 ಹಾಗೂ ಅದರ  ಅಡಿ ರಚಿತವಾದ ನಿಯಮಗಳೊಳಗೆ ಒಳಪಟ್ಟು ತಿದ್ದುಪಡಿ ತರಲು ಅವಕಾಶವಿದ್ದು, ಅಂತಹ ಅಗತ್ಯ ತಿದ್ದುಪಡಿಗಳನ್ನು ಮಹಾಸಭೆಗಳಲ್ಲಿ 2/3 ರಷ್ಟು ಬಹುಮತದ ಆದಾರದ ಮೇಲೆ ಮಾಡಬಹುದಾಗಿರುತ್ತದೆ ಅಥವಾ ತಿದ್ದುಪಡಿ ತರಬಹುದಾಗಿರುತ್ತದೆ.

ವಿಸರ್ಜನೆ

ಸದರಿ ಸಂಘಟನೆಯನ್ನು ಶಾಶ್ವತ ಅಥವಾ ದೀರ್ಘಕಾಲಿಕ ಸಂಘಟನೆಯನ್ನಾಗಿಸುವ ಮಹತ್ವದ ಆಶಯದೊಂದಿಗೆ ರಚಿಸಲಾಗಿದ್ದಾಗ್ಯೂ ಅನಿವಾರ್ಯ ಸಂದರ್ಭಗಳಲ್ಲಿ ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಅಧಿನಿಯಮ ಹಾಗೂ ಅದರ ಅಡಿ ರಚಿತವಾದ ನಿಯಮಗಳಿಗೆ ಒಳಪಟ್ಟು ವಿಸರ್ಜಿಸಬಹುದಾಗಿರುತ್ತದೆ. ಹೀಗೆ ವಿಸರ್ಜನೆಗೊಂಡ ಅನಂತರದಲ್ಲಿ ಸಂಘಟನೆಯ ಸಮಸ್ತ ಚರ/ ಸ್ಥಿರ ಆಸ್ತಿಗಳು ಯಾವುದೇ ಪದಾಧಿಕಾರಿಗಳಿಗೆ ಅಥವಾ ಸದಸ್ಯರಿಗೆ ನೀಡತಕ್ಕದಲ್ಲ. ಬದಲಾಗಿ ಸಮಾನ ದ್ಯೇಯೋದ್ದೇಶಗಳುಳ್ಳ ಸಂಘ ಸಂಸ್ಥೆಗಳಿಗೆ ಅಥವಾ ಸರಕಾರಕ್ಕೆ ವರ್ಗಾವಣೆಯಾಗತಕ್ಕದ್ದು.