ಪ್ರಧಾನ ಕಾರ್ಯದರ್ಶಿಯವರ ಸಂದೇಶ

ಸಮಾಜದಲ್ಲಿ ಶೋಷಣೆಗೆ ಒಳಗಾದ ಸಮುದಾಯವು ಸಾಮಾನ್ಯ ಸಮಾಜದಿಂದ ಪರಿಗಣನೆಗೆ ಒಳಗಾಗದೇ ಇದ್ದಾಗ , ಶೋಷಿತ ಸಮುದಾಯವು ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು, ತನ್ನ ಗುರುತು ಅಳಿಸದಂತೆ ಎಚ್ಚರದಿಂದಲೇ ಇರುತ್ತದೆ ಮತ್ತು ದಿನಂಪ್ರತಿಯೂ ಇಂತಹ ಸಮುದಾಯವು ಸಮಾಜ ಹಾಗೂ ಸರ್ಕಾರದೊಂದಿಗೆ ನಿರಂತರವಾಗಿ ಪ್ರಜ್ಞಾಪೂರ್ವಕವಾಗಿ ಹೋರಾಟ ನಡೆಸುತ್ತಿರಲೇಬೇಕಾಗುತ್ತದೆ.

ಈ ನಿಟ್ಟಿನಲ್ಲೇ ಅಂಧ ಸಮುದಾಯವು ಅನೇಕ ವರ್ಷಗಳಿಂದ ಪುಟ್ಟ ಪುಟ್ಟ ಗುಂಪುಗಳನ್ನಾಗಿ ಮಾಡಿಕೊಂಡು ಸಮಾಜ ಹಾಗೂ ಸರ್ಕಾರದ ಕಣ್ಣು ತೆರೆಸಲು ಸತತವಾಗಿ ಹೋರಾಟ ನಡೆಸುತ್ತಲೇ ಬಂದಿದೆ, ಈಗಲೂ ನಡೆಸುತ್ತಲೇ ಇದೆ. ಆ ಗಟ್ಟಿತನದ ಹೋರಾಟದ ಫಲವಾಗಿಯೇ, ಇಂದು ನಾವು ಸಮಾಜದಲ್ಲಿ ಒಂದು ಭದ್ರ ಸ್ಥಾನವನ್ನ ಗಳಿಸಿಕೊಳ್ಳುವತ್ತ ಪ್ರಯತ್ನವನ್ನು ಮುಂದುವರಿಸುತ್ತಿದ್ದೇವೆ. ನಮ್ಮ ಸಮುದಾಯವು ಈ ಸಮಾಜದಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸಿಕೊಳ್ಳಲು ವ್ಯವಸ್ಥಿತ ರೀತಿಯಲ್ಲಿ  ಸಂಘಟಿತವಾಗಿರಬೇಕಾದದ್ದು ಅತ್ಯಾವಶ್ಯಕವಾಗಿರುತ್ತದೆ.

ಇಂತದ್ದೇ ರೀತಿಯ ಮನೋಭೂಮಿಕೆಯನ್ನು ಸಿದ್ಧಪಡಿಸಲು ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘವು ಸಮಸ್ತ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರಿಗೆ ಮಾನಸಿಕವಾಗಿ ಭೌತಿಕವಾಗಿ ಸಹಕರಿಸುತ್ತಲೇ,  “ಒಗ್ಗಟ್ಟಿನಲ್ಲಿ ಬಲವಿದೆ” ಎಂಬ ತತ್ವದಲ್ಲಿ ನಂಬಿಕೆಯನ್ನಿರಿಸಿಕೊಂಡು, ನಾಡು-ನುಡಿ-ಸಂಸ್ಕೃತಿ-ಪರಂಪರೆ-ವೈಜ್ಞಾನಿಕ ಚಿಂತನೆ-ತಂತ್ರಜ್ಞಾನ ಇವೇ ಮೊದಲಾದ ನೆಲೆಗಳಲ್ಲಿ ನಮ್ಮ ಅಂಧ ಸಮುದಾಯವನ್ನು ಗಟ್ಟಿಗೊಳಿಸಲು ಸಮರ್ಪಿತವಾಗಿದೆ..

ಬನ್ನಿ ನಮ್ಮ ಸಂಘಟನೆಯೊಂದಿಗೆ ಕೈಜೋಡಿಸಿ.
ನಿಮ್ಮ ವೃತ್ತಿ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಸಂಘಟನೆಯು ಆಪ್ತ ಮಿತ್ರನಂತೆ ಸಹಕರಿಸುತ್ತದೆ.

ಕೇಶವ ಮೂರ್ತಿ M,
ಪ್ರಧಾನ ಕಾರ್ಯದರ್ಶಿ,
ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ.